ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ: ಕೇಂದ್ರದ ನಿಲುವು ಖಂಡನೀಯ- ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 13:15 IST
Last Updated 10 ಡಿಸೆಂಬರ್ 2018, 13:15 IST
ಸಿದ್ಧರಾಮ ಸ್ವಾಮೀಜಿ
ಸಿದ್ಧರಾಮ ಸ್ವಾಮೀಜಿ   

ಗದಗ: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ವಿವೇಚನಾ ರಹಿತ ಕ್ರಮವಾಗಿದೆ. ಇದು ಸಮಸ್ತ ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಸಂವಿಧಾನ ವಿರೋಧಿ ಕ್ರಮ’ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಖಂಡಿಸಿದ್ದಾರೆ.

‘ಲಿಂಗಾಯತರು ತಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೇಳುತ್ತಿರುವುದು ಯಾವುದೇ ಭಿಕ್ಷೆಯಲ್ಲ.ಅದು ಲಿಂಗಾಯತರ ಸಂವಿಧಾನ ಬದ್ಧ ಹಕ್ಕು. ಕೇಂದ್ರ ಸರ್ಕಾರ ಈ ಧರ್ಮಕ್ಕೆ ಮಾನ್ಯತೆ ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು. ಆದರೆ, ಬಸವಣ್ಣನವರ ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿದೆ’ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟವು ಜೈನ, ಬೌದ್ಧ, ಸಿಖ್‌ ಧರ್ಮೀಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟವಾಗಿದೆ. ಭಾರತದ ಪ್ರಥಮ ವಿಚಾರವಾದಿ ಎನಿಸಿದ, ಇಡೀ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಪರಿಚಯಿಸಿದ ಮಹಾನ್‌ ಮಾನವತಾವಾದಿ ಎನಿಸಿದ ಬಸವಣ್ಣನವರು ಸ್ಥಾಪಿಸಿದ, ಲಿಂಗಾಯತ ಧರ್ಮವು ತಾತ್ವಿಕವಾಗಿ, ಸಾಮಾಜಿಕವಾಗಿ ಹಿಂದೂ ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯ ಮಾಡುವುದರಿಂದ ಈ ಧರ್ಮದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ಎಂದು ಸ್ವಾಮೀಜಿ ಹೇಳಿದ್ದಾರೆ.

ADVERTISEMENT

‘ಲಿಂಗಾಯತ ಹೊರತುಪಡಿಸಿ, ದೇಶದ ಯಾವುದೇ ಸಮುದಾಯವು ಈ ರೀತಿ ಸ್ವತಂತ್ರ ಧರ್ಮದ ಮಾನ್ಯತೆಯನ್ನೂ ಕೇಳಲು ಸಾಧ್ಯವಿಲ್ಲ. ಏಕೆಂದರೆ ಲಿಂಗಾಯತ ಧರ್ಮದ ತಾತ್ವಿಕ ನೆಲೆಗಟ್ಟು ಯಾವ ಸಮುದಾಯಕ್ಕೂ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕ್ರಮ ಸೂಕ್ತವಲ್ಲ. ಬರುವ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈಗಲೂ ಕಾಲಮಿಂಚಿಲ್ಲ ಕೇಂದ್ರ ಸರ್ಕಾರ ತಿರಸ್ಕೃತ ಪ್ರಸ್ತಾವನೆಯನ್ನು ಪುನ ಪರಿಶೀಲಸಬೇಕು’ ಎಂದು ಸಿದ್ಧರಾಮ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.