ADVERTISEMENT

‘ನಾಡು,ನುಡಿಯ ಮಹಾಪೋಷಕರಾಗಿದ್ದ ಸಿದ್ಧಲಿಂಗ ಶ್ರೀ’

ತೋಂಟದಾರ್ಯ ಮಠದಲ್ಲಿ ವಿಶೇಷವಾಗಿ ಕನ್ನಡ ತಿಂಗಳು ಆಚರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 10:23 IST
Last Updated 14 ನವೆಂಬರ್ 2018, 10:23 IST
ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಾ.ಗುರುಲಿಂಗ ಕಾಪಸೆ ಅವರನ್ನು ಸನ್ಮಾನಿಸಲಾಯಿತು. ಡಾ. ಸಿದ್ಧರಾಮ ಸ್ವಾಮೀಜಿ, ಮೃತ್ಯುಂಜಯ ರುಮಾಲೆ, ಎಸ್.ಎಸ್.ಪಾಟೀಲ, ಚನ್ನಪ್ಪ ಅಂಗಡಿ, ಚಂದ್ರಶೇಖರ ವಸ್ತ್ರದ, ಶಶಿಧರ ತೋಡ್ಕರ್, ಶೇಖಣ್ಣ ಕವಳಿಕಾಳಿ, ವಿವೇಕಾನಂದಗೌಡ ಪಾಟೀಲ ಇದ್ದಾರೆ
ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಡಾ.ಗುರುಲಿಂಗ ಕಾಪಸೆ ಅವರನ್ನು ಸನ್ಮಾನಿಸಲಾಯಿತು. ಡಾ. ಸಿದ್ಧರಾಮ ಸ್ವಾಮೀಜಿ, ಮೃತ್ಯುಂಜಯ ರುಮಾಲೆ, ಎಸ್.ಎಸ್.ಪಾಟೀಲ, ಚನ್ನಪ್ಪ ಅಂಗಡಿ, ಚಂದ್ರಶೇಖರ ವಸ್ತ್ರದ, ಶಶಿಧರ ತೋಡ್ಕರ್, ಶೇಖಣ್ಣ ಕವಳಿಕಾಳಿ, ವಿವೇಕಾನಂದಗೌಡ ಪಾಟೀಲ ಇದ್ದಾರೆ   

ಗದಗ:‘ಕನ್ನಡ ನೆಲದ ಧರ್ಮ ಲಿಂಗಾಯತ ಧರ್ಮವಾಗಿದೆ. ಬಸವಾದಿ ಶರಣರ ನಂತರ ಎಡೆಯೂರ ಸಿದ್ಧಲಿಂಗೇಶ್ವರರು ಆ ಕಾರ್ಯವನ್ನು ಮಾಡಿದರು. ಸಿದ್ಧಲಿಂಗ ಶ್ರೀಗಳು ಈ ಪರಂಪರೆಯನ್ನು ಮುಂದುವರಿಸಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ’ಎಂದು ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಸ್ಮರಿಸಿದರು.

ಮಠದಲ್ಲಿ ಲಿಂಗೈಕ್ಯ ತೋಂಟದ ಶ್ರೀಗಳ ಸ್ಮರಣೆಗಾಗಿ ಹಮ್ಮಿಕೊಂಡಿರುವ ಕನ್ನಡ ತಿಂಗಳು–ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಕಾಲಘಟ್ಟದಲ್ಲಿ ಎತ್ತರದ ಸ್ಥಾನವನ್ನು ಪಡೆದಿದೆ. ಶರಣರು ಅನುಭಾವದ ಅಮೃತವನ್ನು ಸರಳಗನ್ನಡದಲ್ಲಿ ನೀಡುವ ಮೂಲಕ ಕನ್ನಡ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದರು.ಸಿದ್ಧಲಿಂಗ ಶ್ರೀಗಳು ಮಠದ ಮೂಲಕ ನೂರಾರು ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯ ಸಂವರ್ಧನೆಗೆ ಮೌಲಿಕ ಕೊಡುಗೆ ನೀಡಿದ್ದಾರೆ. ಅವರು ನಾಡು, ನುಡಿ ಸಂಸ್ಕೃತಿಯ ಮಹಾಪೋಷಕರಾಗಿದ್ದರು’ಎಂದರು.

ADVERTISEMENT

ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಸಾಧನೆ- ಸಾಹಿತ್ಯ ಸಂಸ್ಕೃತಿ ಸಂವರ್ಧನೆ ಕುರಿತು ಹೊಸಪೇಟೆಯ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಅವರು ಮಾತನಾಡಿದರು. ‘ಗೋಕಾಕ ಚಳವಳಿಗೆ ಪ್ರಾರಂಭ ನೀಡಿದವರೇ ಶ್ರೀಗಳು. ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ರಾಜಿ ಇಲ್ಲದೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದರು. ಲಿಂಗಾಯತ ಅಧ್ಯಯನ ಸಂಸ್ಥೆ ಪ್ರಾರಂಭಿಸಿ,ಸಾಹಿತ್ಯ ಪೋಷಣೆಯ ಜತೆಗೆ ಸಾಹಿತಿಗಳನ್ನು ಗೌರವಿಸುವ ಕಾರ್ಯ ಮಾಡಿದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಠಗಳ ಪಾತ್ರವನ್ನು ಸ್ಪಷ್ಟಪಡಿಸಿದರು’ಎಂದರು.

ಹಿರಿಯ ಸಾಹಿತಿ ಧಾರವಾಡ ಡಾ. ಗುರುಲಿಂಗ ಕಾಪಸೆ ಅವರು ಸನ್ಮಾನ ಸ್ವೀಕರಿಸಿ, ‘ಅನನ್ಯವಾದ ಭಕ್ತಿ, ಶ್ರದ್ಧೆಯ ಮೂಲಕ ದೇವನನ್ನು ಕಾಣಬಹುದು. ಬಸವಾದಿ ಶರಣರ ಅನುಭಾವದ ನುಡಿಗಳು ಜೀವನದ ಸತ್ಯದರ್ಶನಕ್ಕೆ ದಾರಿದೀಪಗಳಾಗಿವೆ. ಸಿದ್ಧಲಿಂಗ ಶ್ರೀಗಳ ಸಾಹಿತ್ಯ ಪ್ರೀತಿ ಅನನ್ಯವಾದುದು’ ಎಂದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನಗಳನ್ನು ಪ್ರಸ್ತುತಪಡಿಸಿದರು. ತೇಜಸ್ವಿನಿ ರಾಜಶೇಖರ ತೋಟದ ಧರ್ಮಗ್ರಂಥ ಪಠಣ, ಉಮಾ ಬಸನಗೌಡ ಬಿನ್ನಾಳ ವಚನ ಚಿಂತನೆ ನೆರವೇರಿಸಿದರು.

ಜಿ.ಪಿ.ಕಟ್ಟಿಮನಿ ನಿರೂಪಿಸಿದರು.ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಚನ್ನಪ್ಪ ಅಂಗಡಿ, ಅನ್ನಪೂರ್ಣಕ್ಕ ಬಡಿಗಣ್ಣವರ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ, ಚಂದ್ರಶೇಖರ ವಸ್ತ್ರದ. ಶಶಿಧರ ತೋಡ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.