
ನರಗುಂದ: ಜಾತ್ರೆ ಎಂದ ತಕ್ಷಣ ಉತ್ತತ್ತಿ, ಉಯ್ಯಾಲೆ, ಮೋಜು -ಮಸ್ತಿ, ನಾಟಕ-ಸಿನಿಮಾ ಎಂಬ ಚಿತ್ರಗಳು ಕಣ್ಣಮುಂದೆ ಹಾಯ್ದು ಹೋಗುವುದು ಸಹಜ. ಆದರೆ, ತಾಲ್ಲೂಕಿನ ಶಿರೋಳದ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆ ಕೋಮು ಸೌಹಾರ್ದ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ತೋಂಟದಾರ್ಯ ಮಠದ ರಥೋತ್ಸವ, ರೊಟ್ಟಿ ಜಾತ್ರೆ ಹಾಗೂ ಲಘು ರಥೋತ್ಸವ ಜ.8ರಿಂದ 10ರವರೆಗೆ ನಡೆಯಲಿದೆ.
ಜಾತ್ರೆಯಲ್ಲಿ ಒಂದು ಲಕ್ಷ ರೊಟ್ಟಿ ಪ್ರಸಾದ ಸವಿಯಲು ಸುಮಾರು 35 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದು, ಸನ್ನಿವೇಶವನ್ನು ಮನದಲ್ಲಿ ನೆನಸಿದರೆ ಸಾಕು ಜಾತ್ರೆ ಹೋಗಬೇಕು ಎನ್ನಿಸುತ್ತದೆ ಎಂದು ಸಾರ್ವಜನಿಕರು ಪುಳಕ ವ್ಯಕ್ತಪಡಿಸುತ್ತಾರೆ.
ಭಕ್ತರು ತಯಾರಿಸಿದ ಸಜ್ಜೆ, ರಾಗಿ, ಜೋಳದ ಒಂದು ಲಕ್ಷಕ್ಕೂ ಹೆಚ್ಚು ರೊಟ್ಟಿಗಳು ಪ್ರಸಾದ ರೂಪದಲ್ಲಿ ವಿತರಣೆಯಾಗುತ್ತವೆ. ಬೆಳೆಕಾಳು ಪಲ್ಯೆ, ಕರಿಹಿಂಡಿ ಪ್ರಸಾದ ಇಲ್ಲಿಯ ವಿಶೇಷ. ಪೌಷ್ಟಿಕಾಂಶ, ರುಚಿಯಾದ ಪದಾರ್ಥಗಳನ್ನು ರೊಟ್ಟಿಯಲ್ಲಿ ಬಡಿಸಿಕೊಂಡು ಭಕ್ತರು ಸೇವಿಸುವುದು ಒಂದು ಸೌಭಾಗ್ಯವೇ ಸರಿ.
ಲಿಂ.ತೋಂಟದ ಸಿದ್ದಲಿಂಗ ಸ್ವಾಮೀಜಿ ಶಿರೋಳದ ತೋಂಟದಾರ್ಯ ಮಠದ ಲಿಂ.ಗುರುಬಸವ ಸ್ವಾಮೀಜಿ ಅವರು ಜಾತ್ರೆಯನ್ನು ಸಮಾಜಮುಖಿ ಮಾಡಿದರು. ಅದೇ ಪರಂಪರೆಯನ್ನು ನಾವು ಕೂಡ ಮುಂದುವರಿಸುತ್ತಿದ್ದೇವೆಶಾಂತಲಿಂಗ ಸ್ವಾಮೀಜಿ ಶಿರೋಳ, ತೋಂಟದಾರ್ಯಮಠ
ಜಾತಿ, ಮತ, ಪಂಥಗಳ ಭೇದ ಇಲ್ಲದೇ ಎಲ್ಲ ಸಮುದಾಯದವರು ಸಕ್ರಿಯವಾಗಿ ಭಾಗವಹಿಸಿ ನಡೆಸುವ ಜಾತ್ರೆ ಭಾವೈಕ್ಯದ ಪ್ರತೀಕ. ಪ್ರತಿ ವರ್ಷದ ಸಂಪ್ರದಾಯದಂತೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸುತ್ತಾರೆ.
ಪಲ್ಲಕ್ಕಿ ಮೆರವಣಿಗೆ: ಹಲವು ವರ್ಷಗಳ ಹಿಂದೆ ಪಲ್ಲಕ್ಕಿಯಲ್ಲಿ ಮನುಷ್ಯರ ಮೆರವಣಿಗೆ ಮಾಡುವುದನ್ನು ವಿರೋಧಿಸಿದ ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರು ಬಸವಣ್ಣ, ಸಿದ್ಧಲಿಂಗೇಶ್ವರ ಮೂರ್ತಿ ಮೆರವಣಿಗೆ ನಡೆಸುವ ಮೂಲಕ ಜನ ಸಮುದಾಯದಲ್ಲಿನ ಮೌಢ್ಯವನ್ನು ತೊರೆದು ಹಾಕಿದ್ದಾರೆ. ಇದೀಗ ಹಿರಿಯರ ಮಾರ್ಗದರ್ಶನದಂತೆ ಪ್ರಸ್ತುತ ಪೀಠಾಧಿಪತಿ ಶಾಂತಲಿಂಗ ಸ್ವಾಮೀಜಿ ಅವರು ಕೂಡ ಮಠದ ಪರಂಪರೆ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.