ADVERTISEMENT

ಮುಳಗುಂದ: 2 ವರ್ಷಗಳಿಂದ ತುಂಗಭದ್ರಾ ನೀರು ಸ್ಥಗಿತ

ನದಿ ನೀರು ಬಳಕೆಯ ಗ್ರಾಮಗಳ ಬಿಲ್ ಬಾಕಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 19:30 IST
Last Updated 30 ಡಿಸೆಂಬರ್ 2020, 19:30 IST
ಬೆಳ್ಳಟ್ಟಿ ಗ್ರಾಮದಲ್ಲಿರುವ ಜಲ ಶುದ್ಧೀಕರಣ ಘಟಕಕ್ಕೆ ನದಿ ನೀರು ಸರಬರಾಜು ಸ್ಥಗಿತಗೊಂಡಿರುವುದು
ಬೆಳ್ಳಟ್ಟಿ ಗ್ರಾಮದಲ್ಲಿರುವ ಜಲ ಶುದ್ಧೀಕರಣ ಘಟಕಕ್ಕೆ ನದಿ ನೀರು ಸರಬರಾಜು ಸ್ಥಗಿತಗೊಂಡಿರುವುದು   

ಮುಳಗುಂದ: ಇಲ್ಲಿಂದ ಸುಮಾರು 60 ಕಿ.ಮೀ. ದೂರದ ಹೊಳೆ ಇಟಗಿ ಜಾಕ್‍ವೆಲ್ ಮೂಲಕ ಸರಬರಾಜು ಆಗುತ್ತಿದ್ದ ತುಂಗಭದ್ರಾ ನದಿ ನೀರು ಬಳಸುತ್ತಿರುವ ಗ್ರಾಮಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ನಿರ್ವಹಣೆ ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.

ಪರಿಣಾಮ ಪಟ್ಟಣದ ಜನ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕಾಗಿದೆ.

2009ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಿರಹಟ್ಟಿ, ಮುಳಗುಂದ ಪಟ್ಟಣ ಪಂಚಾಯ್ತಿಗಳ ಸಹಯೋಗದಲ್ಲಿ ₹33.50 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿತ್ತು. 2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನದಿ ನೀರು ಸರಬರಾಜಿಗೆ ಚಾಲನೆ ನೀಡಿದ್ದರು.

ADVERTISEMENT

ಆರಂಭದಲ್ಲಿ ಉತ್ತಮವಾಗಿ ನಿರ್ವಹಣೆಯಾಗಿತ್ತು. ನಂತರದ ದಿನಗಳಲ್ಲಿ ಮಾರ್ಗ ಮಧ್ಯೆ ನೀರು ಬಳಸುವ ಸುಗ್ನಳ್ಳಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಹೊಸೂರ, ಛಬ್ಬಿ, ರಣತೂರ ಗ್ರಾಮಗಳು ತಮ್ಮ ಪಾಲಿನ ಹಣವನ್ನು 2016ರ ಮಾರ್ಚ್‌ 31ರಿಂದ 2020ರ ವರೆಗೆ ಸುಮಾರು ₹1.22 ಕೋಟಿ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ನೀರು ಸರಬರಾಜು ಸ್ಥಗಿತಗೊಂಡಿದೆ.

ಪಟ್ಟಣಕ್ಕೆ ನದಿ ನೀರು ಸರಬರಾಜು ಆದಾಗ ಕೊಳವೆ ಬಾವಿಯ ಪ್ಲೋರೈಡ್ ಪೂರಿತ ನೀರಿನಿಂದ ಮುಕ್ತಿ ಸಿಕ್ಕಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ ಜನ ಈಗ ಪರದಾಡುವಂತಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಕೂಡಲೆ ಈ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರಾದ ಬುದ್ದಪ್ಪ ಮಾಡಳ್ಳಿ ಆಗ್ರಹಿಸಿದರು.

ತುಂಗಭದ್ರಾ ನದಿ ನೀರು ಸರಬರಾಜು ಸ್ಥಗಿತಗೊಂಡ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಎಚ್.ಕೆ.ಪಾಟೀಲ ಈಚೆಗೆ ಹೇಳಿದ್ದರು.

‘ಪತ್ರ ಬರೆದರೂ ಪ್ರಯೋಜನವಾಗಿಲ್ಲ’

ನದಿ ನೀರು ಸರಬರಾಜು ನಿರ್ವಹಣೆ ಹೊಣೆಯನ್ನು 2017ರಲ್ಲಿ ಮುಳಗುಂದ ಪಟ್ಟಣ ಪಂಚಾಯ್ತಿಗೆ ವಹಿಸಲಾಗಿದೆ. ಅದರಂತೆ ಪಂಚಾಯ್ತಿ ತನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ಬಾಕಿ ಉಳಿಸಿಕೊಂಡ ಹಣ ಪಾವತಿ ಮಾಡುವಂತೆ ನೀರು ಬಳಕೆ ಮಾಡಿಕೊಂಡ ಗ್ರಾಮಗಳ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಮೂರು ವರ್ಷಗಳಿಂದ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ನಿರ್ವಹಣೆ ಇಲ್ಲದೇ ನದಿ ನೀರು ಸರಬರಾಜು ಸ್ಥಗಿತವಾಗಿದೆ ಎಂದು ಮುಳಗುಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.