ಮುಂಡರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ವತಿಯಿಂದ ನಿಯಮಿತವಾಗಿ ನಡೆಸಿಕೊಂಡು ಬಂದಿರುವ ‘ಶರಣ ಚಿಂತನ ಮಾಲಿಕೆ’ ಕಾರ್ಯಕ್ರಮವು ಸೆ.7 ರಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ತಾಲ್ಲೂಕಿನ ಸಾಹಿತ್ಯ ಆಸಕ್ತರಲ್ಲಿ ಸಂತಸ ಮೂಡಿಸಿದೆ.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ಹಿರೇಮಠ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಅವರ ಸಹಭಾಗಿತ್ವದಲ್ಲಿ ‘ವಚನ ಚಿಂತನ ಮಾಲೆ’ ಕಾರ್ಯಕ್ರಮ ನಡೆದು ಬಂದಿದೆ.
2024ರ ಸೆ.16ರಂದು ಆರಂಭವಾದ ಈ ಕಾರ್ಯಕ್ರಮವು 15 ದಿನಗಳಿಗೊಮ್ಮೆ ಇಲ್ಲಿಯ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆಯುತ್ತಲಿದೆ. ಪ್ರತಿ ತಿಂಗಳ ಮೊದಲ ಸೋಮವಾರ ಸಂಜೆ 6ಕ್ಕೆ ಆರಂಭವಾಗುವ ಕಾರ್ಯಕ್ರಮ 7.45ಕ್ಕೆ ಮುಕ್ತಾಯವಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಒಬ್ಬ ಗಣ್ಯರು ಮಾಲಿಕೆ ಉದ್ಘಾಟಿಸುವರು. ಉಪೇಕ್ಷಿತ ವಚನಕಾರರ ಕುರಿತು ಉಪನ್ಯಾಸ ನೀಡುತ್ತಾರೆ.
12ನೇ ಶತಮಾನದ ಪ್ರಮುಖ ವಚನಕಾರರನ್ನು ಹೊರತುಪಡಿಸಿ ಜನಸಾಮಾನ್ಯರು ಹಾಗೂ ಆರಂಭಿಕ ಓದುಗರಿಗೆ ಅಪರಿಚಿತರಾಗಿರುವ ಉಪೇಕ್ಷಿತ ವಚನಕಾರರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸುವ ಮೂಲಕ ತೆರೆಮರೆಯ ವಚನಕಾರರ ಜೀವನ, ಸಾಧನೆ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ.
ರಜತ ಸಂಭ್ರಮ ಇಂದು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೆ.7ರಂದು ಸಂಜೆ 7.30ಕ್ಕೆ ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ 25ನೇ ವಚನ ಚಿಂತನ ಮಾಲಿಕೆ ಹಮ್ಮಿಕೊಳ್ಳಲಾಗಿದೆ. ಅನ್ನದಾನೀಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಲಿದ್ದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎ. ಬಳಿಗಾರ ಶರಣ ಚಿಂತನೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಆರ್.ಎಲ್. ಪೊಲೀಸಪಾಟೀಲ ಎಂ.ಜಿ. ಗಚ್ಚಣ್ಣವರ ವೀಣಾ ಪಾಟೀಲ ಸಂತೋಷ ಹಿರೇಮಠ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.