ADVERTISEMENT

ವೀರಾಪುರ | ಹೂಳು ತುಂಬಿಕೊಂಡ ಚರಂಡಿ: ಸ್ವಚ್ಛತೆ ಮಾಯ

ಶ್ರೀಶೈಲ ಎಂ.ಕುಂಬಾರ
Published 1 ಅಕ್ಟೋಬರ್ 2025, 6:41 IST
Last Updated 1 ಅಕ್ಟೋಬರ್ 2025, 6:41 IST
ಗಜೇಂದ್ರಗಡ ಸಮೀಪದ ವೀರಾಪುರ ಗ್ರಾಮದಲ್ಲಿನ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿ ಕಸ ಬೆಳೆದಿರುವುದು
ಗಜೇಂದ್ರಗಡ ಸಮೀಪದ ವೀರಾಪುರ ಗ್ರಾಮದಲ್ಲಿನ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿ ಕಸ ಬೆಳೆದಿರುವುದು   

ಗಜೇಂದ್ರಗಡ: ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿನ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡಿವೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಕಸದ ರಾಶಿಯಿಂದ ಕೂಡಿದ್ದು, ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ.

ಗಜೇಂದ್ರಗಡ ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಜನರು ಕಸದ ರಾಶಿ ಹಾಗೂ ತಿಪ್ಪೆ ಹಾಕುವುದರ ಜೊತೆಗೆ ಶೌಚಕ್ಕೆ ಬಳಸುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ಗ್ರಾಮದ ಓಣಿಗಳಲ್ಲಿ ಜನರು ಕಸ ಹಾಗೂ ಇನ್ನಿತರ ತ್ಯಾಜ್ಯವನ್ನು ರಸ್ತೆಗೆ ಎಸೆಯುತ್ತಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ಶೇಖರಣೆಯಾಗಿ ಚರಂಡಿ ಕಟ್ಟಿಕೊಂಡಿರುವುದು ಸಾಮಾನ್ಯವಾಗಿದೆ.

ಗ್ರಾಮದ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡು ಆಪು ಬೆಳೆದಿದೆ. ಗ್ರಾಮದ ಪ್ರಾಥಮಿಕ ಶಾಲೆಯ ಮುಂದೆ ಹಾಗೂ ಹಿಂದಿನ ಚರಂಡಿಗಳಲ್ಲಿಯೂ ಹೂಳು ತುಂಬಿ ಕಸ ಬೆಳೆದಿದೆ. ರಸ್ತೆ ಪಕ್ಕದಲ್ಲಿ ಜಾಲಿ ಕಂಟಿಗಳು ಬೆಳೆದು ನಿಂತಿವೆ.

ADVERTISEMENT

ಗ್ರಾಮದ ಕೆಲ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಿಂದ ಹಾಳಾಗಿರುವ ಸಿಸಿ ರಸ್ತೆ ದುರಸ್ತಿ ಮಾಡಲಾಗಿದೆ. ಆದರೆ, ಸರಿಯಾಗಿ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಸಿಮೆಂಟ್‌ ಕಿತ್ತು ಹೋಗಿದೆ. ಅಲ್ಲದೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದ್ದು, ಘಟಕ ಹಾಗೂ ಉಪಕರಣಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ.

‘ಗ್ರಾಮದಿಂದ ಮುಧೋಳ ಹಾಗೂ ಸಂಕನೂರ ಮಾರ್ಗಗಳ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಜಮೀನುಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿನ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ. 

ಗ್ರಾಮದಲ್ಲಿ ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಛತೆ ಮಾಡಿಸಲಾಗುತ್ತಿದೆ. ಜನರು ಕಸ ತ್ಯಾಜ್ಯವನ್ನು ರಸ್ತೆ ಮೇಲೆ ಹಾಕುತ್ತಿರುವುದರಿಂದ ಹೂಳು ತುಂಬಿಕೊಂಡು ಚರಂಡಿಗಳು ಕಟ್ಟಿಕೊಳ್ಳುತ್ತಿವೆ. ಗ್ರಾಮದ ಸ್ವಚ್ಛತೆಗೆ ಗ್ರಾಮಸ್ಥರೂ ಸಹ ಸಹಕಾರ ನೀಡಬೇಕು
ಮುತ್ತವ್ವ ಗುಡದೂರ ಗ್ರಾಮ ಪಂಚಾಯಿತಿ ಸದಸ್ಯೆ ವೀರಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.