ನರೇಗಲ್ ಪಟ್ಟಣದಲ್ಲಿ ಮಾ.8 ರಂದು ನಡೆದ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಗೋದಾಮು ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ರೋಣ ಶಾಸಕ ಜಿ. ಎಸ್. ಪಾಟೀಲ ನೆರವೇರಿಸಿದರು
(ಸಂಗ್ರಹ ಚಿತ್ರ)
ನರೇಗಲ್: ರೋಣ ಮತಕ್ಷೇತ್ರದ ಅಭಿವೃದ್ದಿ ಬಗ್ಗೆ ಸದಾ ಯೋಚಿಸುವ ಸರಳ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಹಾಗೂ ಕಾಯಕದ ಮೂಲಕ ಜನರ ಮನದಲ್ಲಿ ಹೆಸರು ಮಾಡಿರುವ ಶಾಸಕ, ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಸಾವಿರ ಕೆರೆಗಳ ಸರದಾರ, ದಾಖಲೆ ಮಟ್ಟದಲ್ಲಿ ಕೃಷಿ ಹೊಂಡ ನಿರ್ಮಿಸಿದ ಶಾಸಕ ಎಂದೇ ಜನಪ್ರಿಯರು.
1983ರಲ್ಲಿ ರಾಜಕೀಯ ಪ್ರವೇಶ ಮಾಡಿದ ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಲಾ ಕಾಲೇಜು, ಧಾರ್ಮಿಕ ಸ್ಥಳ, ಮೂಲಸೌಕರ್ಯಗಳು ಸೇರಿದಂತೆ ಅನೇಕ ಸುಧಾರಣೆಗಳನ್ನು ತಮ್ಮ ಮತಕ್ಷೇತ್ರದಲ್ಲಿ ಮಾಡಿದ್ದಾರೆ. ನದಿ, ಕಾಲುವೆಯ ಜಲಮೂಲಗಳಿಲ್ಲದ ರೋಣ ಮತಕ್ಷೇತ್ರದಲ್ಲಿ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿ ‘ಸಾವಿರ ಕೆರೆಗಳ ಸರದಾರ’ ಎಂದು ಹೆಸರಾಗಿದ್ದಾರೆ. ಕನ್ನಡ ನಾಡುನುಡಿ, ಧರ್ಮ, ಸಂಸ್ಕೃತಿಗಳ ಜೊತೆಗೆ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ.
ಮಾತೋಶ್ರೀ ಬಸಮ್ಮನವರ ನೆನಪಿಗಾಗಿ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆ ಶಿಬಿರ, ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ, ಶಸ್ತ್ರಚಿಕಿತ್ಸೆ, ಗ್ರಾಮೀಣ ಪ್ರದೇಶದ 5 ಸಾವಿರ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್, ಕೋವಿಡ್ ಸಂದರ್ಭದಲ್ಲಿ 100 ಹಾಸಿಗೆ ಘಟಕ ಸ್ಥಾಪಿಸಿ ಉಚಿತವಾಗಿ ಆರೋಗ್ಯ ಚಿಕಿತ್ಸೆ ಪೂರೈಸಿದ್ದಾರೆ. ಯುವಕರಿಗಾಗಿ ನೌಕರಿ ಉತ್ಸವ, ಸ್ಪರ್ಧಾ ತರಬೇತಿ ಆಯೋಜಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಹಾಗೂ ಇಲ್ಲದಿರುವಾಗಲೂ ಜನರ ಜೊತೆಯಲ್ಲಿ ನೇರ ಸಂಪರ್ಕ ಹೊಂದಿದ್ದಾರೆ. ನರೇಗಲ್ ಸಮೀಪದ ಅಬ್ಬಿಗೇರಿಯಲ್ಲಿ 2024ರ ಅ. 8ರಂದು ನಡೆದ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮದಲ್ಲಿ ಇವರಿಗೆ ‘ವೀರಶೈವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಭಕ್ತರಾಗಿರುವ ಶಾಸಕರು ಧರ್ಮಜಾಗೃತಿ ಸಭೆಗಳನ್ನು ಸಂಘಟಿಸಿದ್ದಾರೆ. ಹಾಲಕೆರೆಯ ಮುಪ್ಪಿನ ಬಸವಲಿಂಗ ಶ್ರೀಗಳ ಪಟ್ಟಾಧಿಕಾರ, ಅಭಿನವ ಅನ್ನದಾನ ಶ್ರೀಗಳು, ಅಬ್ಬಿಗೇರಿಯ ಸೋಮಶೇಖರ ಶಿವಾಚಾರ್ಯರು ಲಿಂಗೈಕ್ಯರಾದಾಗ, ಅಬ್ಬಿಗೇರಿಯಲ್ಲಿ ನಡೆದ ರಂಭಾಪುರಿ ಶ್ರೀಗಳ ದಸರಾ ದರ್ಬಾರಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
‘ಕ್ಷೇತ್ರದಲ್ಲಿ ನಿತ್ಯ ಸಂಚರಿಸುತ್ತ ಜನರಿಗೆ ಸ್ಪಂದಿಸುತ್ತಾರೆ. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮತಕ್ಷೇತ್ರದ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಯಾವತ್ತೂ ಅಧಿಕಾರದ ಹಿಂದೆ ಬೀಳದೆ, ಮಂತ್ರಿಗಿರಿಗಾಗಿ ಪಟ್ಟು ಹಿಡಿಯದೇ ಜನರ ಅಭಿವೃದ್ದಿಗೆ ಹೆಚ್ಚಿನ ಮಹತ್ವ ಕೊಡುವ ಕಾರಣ ಕ್ಷೇತ್ರದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ’ ಎಂದು ಮುಖಂಡ ಅಲ್ಲಾಬಕ್ಷಿ ನದಾಫ್ ಹೇಳುತ್ತಾರೆ.
ಜನರ ಆಶೀರ್ವಾದದಿಂದ ರೋಣ ಮತಕ್ಷೇತ್ರದ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಅಭಿವೃದ್ದಿ ಕೆಲಸಗಳಿಗೆ ಮೀಸಲಿಟ್ಟಿದ್ದೇನೆ. ಜೀವನದ ಕೊನೆವರೆಗೂ ಈ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುವೆ–ಜಿ. ಎಸ್. ಪಾಟೀಲ ರೋಣ ಶಾಸಕ
ದೀನ ದಲಿತರ ಬಡವರ ಬಗ್ಗೆ ಚಿಂತಿಸುವ ಹಾಗೂ ಅಭಿವೃದಿ ಕಾರ್ಯಗಳ ಬಗ್ಗೆ ಶ್ರಮಿಸುವ ಹಿರಿಯ ಶಾಸಕ ಜಿ.ಎಸ್.ಪಾಟೀಲರು ರೋಣ ಕ್ಷೇತ್ರದ ಜನರಿಗೆ ಸಿಕ್ಕಿರುವುದು ಭಾಗ್ಯವಾಗಿದೆ–ಮೈಲಾರಪ್ಪ ವೀ. ಚಳ್ಳಮರದ ದಲಿತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.