ಗದಗ: ಅವಳಿ ನಗರದ ಜನರು ಗುರುವಾರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನವರಾತ್ರಿ ಆರಂಭದಿಂದ ಪ್ರತಿದಿನ ಬೆಳಗಿನ ಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ ಮಹಿಳೆಯರು ವಿಜಯದಶಮಿ ಹಬ್ಬದಂದು ಬೆಳಿಗ್ಗೆ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಹರಸಿದರು.
ನವರಾತ್ರಿ ಉತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನಿರಂತರವಾಗಿ ಸಾಗಿಬಂದ ಆದಿಶಕ್ತಿ ಕುರಿತಾದ ಪುರಾಣ ಪ್ರವಚನಗಳು ಬುಧವಾರ ಮಂಗಲಗೊಂಡವು. ನಗರದ ವಿವಿಧ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ನಡೆದವು. ಕೆಲವೆಡೆ ಅನ್ನಸಂತರ್ಪಣೆ ನಡೆಯಿತು.
ತೋಂಟದಾರ್ಯ ಮಠದ ಆವರಣ, ಶಂಕರಲಿಂಗ ದೇವಸ್ಥಾನ, ರಾಜೀವ್‌ಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ, ಬೆಟಗೇರಿ ಟರ್ನಲ್ ಪೇಟೆ, ರಂಗಪ್ಪಜ್ಜನಮಠದ ಮುಂಭಾಗ, ನರಸಾಪೂರ ಸೇರಿದಂತೆ ವಿವಿಧ ಭಾಗಗಳಲ್ಲಿನ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮುಡಿದ ನಂತರ, ‘ನಾವು-ನೀವೂ ಬಂಗಾರದಂತಹ ಜೀವನ ಸಾಗಿಸೋಣ’ ಎಂಬ ಹಾರೈಕೆಯೊಂದಿಗೆ ಸಾರ್ವಜನಿಕರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರಿಗೆ ಬನ್ನಿ ಪತ್ರಿ ನೀಡಿ ಆಶೀರ್ವಾದ ಪಡೆದರು.
ತೋಂಟದ ಶ್ರೀಗಳಿಂದ ಬನ್ನಿ ವಿತರಣೆ
ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಗುರುವಾರ ಸಂಜೆ ಭಕ್ತರಿಗೆ ಬನ್ನಿ ನೀಡಿ ಆಶೀರ್ವದಿಸಿದರು. ನೂರಾರು ಭಕ್ತರು ಮಠದ ಆವರಣದಲ್ಲಿ ನೆರೆದು ಶ್ರೀಗಳ ಆಶೀರ್ವಚನ ಆಲಿಸಿದರು. ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಗಳು ಸಂಜೆ ನಗರದ ಭೀಷ್ಮ ಕೆರೆ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನ ಬಯಲಿಗೆ ಆಗಮಿಸಿದವು. ಅಲ್ಲಿನ ಬನ್ನಿ ಗಿಡಕ್ಕೆ ವೀರ ನಾರಾಯಣ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದರು. ಬನ್ನಿ ಮುಡಿದ ನಂತರ ಹಲವು ಗಣ್ಯರು ಕೆರೆ ಆವರಣದಲ್ಲಿಯೇ ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.