
ಗದಗ: ‘2030ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಆಗಲಿವೆ. ಮುಂದೆ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡೆಕ್ಟರ್, ಸ್ಪೇಸ್ ಮತ್ತು ಬಯೋಟೆಕ್ನಾಲಜಿ ತಂತ್ರಜ್ಞಾನ ಜಗತ್ತನ್ನು ಆಳಲಿವೆ’ ಎಂದು ವಿಟಿಯು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ತಿಳಿಸಿದರು.
ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಹೊಸ ಅಕಾಡೆಮಿಕ್ ಬ್ಲಾಕ್ ಶಿಲಾನ್ಯಾಸ ಸಮಾರಂಭ ಹಾಗೂ ಎಐಸಿಟಿಇ ಐಡಿಯಾ ಲ್ಯಾಬ್ ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಈಗ ಇರುವ ಉದ್ಯೋಗಗಳು 2030ರ ವೇಳೆ ಇರುವುದಿಲ್ಲ. ಈಗ ಕಂಪ್ಯೂಟರ್ ಸೈನ್ಸ್ ಕಲಿತ ಶೇ 85 ವಿದ್ಯಾರ್ಥಿಗಳು ಕೆಲಸ ಗಿಟ್ಟಿಸುತ್ತಿದ್ದಾರೆ. ಆದರೆ, ಮುಂದೆ ಆ ಉದ್ಯೋಗಗಳೇ ಇರುವುದಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಪಲ್ಲಟಗಳನ್ನು ಈಗಿನಿಂದಲೇ ತಿಳಿದುಕೊಂಡು, ಅದಕ್ಕೆ ತಕ್ಕಂತೆ ಜ್ಞಾನ ಮತ್ತು ಕೌಶಲ ವೃದ್ಧಿಸಿಕೊಳ್ಳಬೇಕು. ಇದಕ್ಕಾಗಿ ವಿಟಿಯು ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.
‘ವಿಟಿಯು ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ 87 ಸಾವಿರ ಮಂದಿ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಅವರಲ್ಲಿ ಐದು ಸಾವಿರ ವಿದ್ಯಾರ್ಥಿಗಳು ಮಾತ್ರ ಹಾನರ್ಸ್ ಮೈನರ್ ಡಿಗ್ರಿ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದವರ ಗತಿ ಏನು? ಸ್ಪರ್ಧೆಗಳನ್ನು ಹೇಗೆ ಎದುರಿಸುತ್ತೀರಿ’ ಎಂದು ಪ್ರಶ್ನಿಸಿದರು.
‘2027ಕ್ಕೆ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಆ ವೇಳೆಗೆ ವಿಕಸಿತ ಭಾರತ ಆಶಯ ಈಡೇರಬೇಕಾದರೆ ಯುವಜನರು ಹೊಸ ತಂತ್ರಜ್ಞಾನ ಕಲಿಕೆ ಜತೆಗೆ ಸಂಶೋಧನೆ, ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು. 9ನೇ ರ‍್ಯಾಂಕಿಂಗ್‌ನಲ್ಲಿರುವ ಭಾರತವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ನಂಬರ್ 1 ಸ್ಥಾನಕ್ಕೆ ತರಲು ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದೆ’ ಎಂದರು.
ತೋಂಟದಾರ್ಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಸ್.ಎಸ್.ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರೋಳದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್.ಪಾಟೀಲ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರೊ. ಎಂ.ಎಂ.ಅವಟಿ ಸ್ವಾಗತಿಸಿದರು.
ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಇದ್ದರು.
ಕಾಲೇಜುಗಳ ರ‍್ಯಾಂಕಿಂಗ್ ನಿರ್ಧರಿಸುವುದು ಪ್ಲೇಸ್‌ಮೆಂಟ್
‘ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ರ‍್ಯಾಂಕಿಂಗ್ ನಿರ್ಧಾರ ಎನ್‌ಬಿಎ ಅಥವಾ ನ್ಯಾಕ್‌ನಲ್ಲಿ ಯಾವ ಶ್ರೇಣಿ ಪಡೆದಿದೆ ಎಂಬುದರ ಮೇಲೆ ಆಗುವುದಿಲ್ಲ. ಬದಲಾಗಿ ಆ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಎಷ್ಟು ಮಂದಿ ವಿದ್ಯಾರ್ಥಿಗಳು ಕೆಲಸ ಪಡೆದುಕೊಂಡರು ಎಂಬುದರ ಮೇಲೆ ರ‍್ಯಾಂಕಿಂಗ್ ನಿರ್ಧಾರವಾಗುತ್ತದೆ’ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದರು. ಒಬ್ಬ ವಿದ್ಯಾರ್ಥಿ ಸರ್ಕಾರಿ ಉದ್ಯೋಗ ಅಥವಾ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಪಡೆಯಬಹುದು. ನೀವು ಅವನನ್ನು ಒಬ್ಬ ಉದ್ಯಮಿಯನ್ನಾಗಿ ರೂಪಿಸಬಹುದು. ಇವುಗಳು ಕಾಲೇಜುಗಳ ಸ್ಥಾನ ನಿರ್ಧರಿಸಲಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.