ADVERTISEMENT

ಮುಂಡರಗಿ | ವಾರ್ಡ್ ಸಮಿತಿ ರಚನೆಗೆ ಕ್ರಮ: ಶಂಕರ ಹುಲ್ಲಮ್ಮನವರ

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:24 IST
Last Updated 22 ಆಗಸ್ಟ್ 2025, 4:24 IST
ವಾರ್ಡ್ ಸಮಿತಿ ರಚಿಸುವ ಕುರಿತು ಮುಂಡರಗಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಜರುಗಿತು
ವಾರ್ಡ್ ಸಮಿತಿ ರಚಿಸುವ ಕುರಿತು ಮುಂಡರಗಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಜರುಗಿತು   

ಮುಂಡರಗಿ: ‘ಸರ್ಕಾರದ ಸೂಚನೆಯಂತೆ ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ ಮಟ್ಟದಲ್ಲಿ ವಾರ್ಡ್ ಸಮಿತಿ ಹಾಗೂ ನೆರೆಹೊರೆ ಎಂಬ ಗುಂಪು ರಚಿಸಲಾಗುವುದು. ಅದರ ಮೂಲಕ ಪಟ್ಟಣದ ಎಲ್ಲ ವಾರ್ಡ್‌ಗಳ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.

ವಾರ್ಡ್ ಸಮಿತಿ ಹಾಗೂ ನೆರೆಹೊರೆ ಗುಂಪು ರಚಿಸುವ ಕುರಿತು ಇಲ್ಲಿಯ ಪುರಸಭೆ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸದಸ್ಯರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ಒಟ್ಟು 23 ವಾರ್ಡುಗಳಿದ್ದು, ಪ್ರತಿಯೊಂದು ವಾರ್ಡಿನ ತಲಾ 100 ಮತದಾರರಿಗೆ ಒಬ್ಬರಂತೆ ನೆರೆಹೊರೆ ಗುಂಪಿನ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುವುದು. ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನೆರೆಹೊರೆ ಗುಂಪಿನ ಪ್ರತಿನಿಧಿಯು ವಾರ್ಡಿನಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಕುಂದು ಕೊರತೆ ಕುರಿತು ಸಮಗ್ರ ಮಾಹಿತಿಯನ್ನು ಸದಸ್ಯರ ಹಾಗೂ ಪುರಸಭೆಯ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ADVERTISEMENT

‘ಸಾವಿರ ಮತದಾರರಿರುವ ವಾರ್ಡಿನಲ್ಲಿ ಹತ್ತು ಜನ ನೆರೆಹೊರೆ ಪ್ರತಿನಿಧಿಗಳು ಹಾಗೂ ಹತ್ತು ಜನ ಕಾರ್ಯದರ್ಶಿಗಳನ್ನು ಒಳಗೊಂಡ ನೆರೆಹೊರೆ ಗುಂಪುಗಳನ್ನು ರಚನೆ ಮಾಡಲಾಗುವುದು. ನೆರೆಹೊರೆ ಗುಂಪಿನ ಎಲ್ಲ ಪ್ರತಿನಿಧಿಗಳು ಕನಿಷ್ಠ ತಿಂಗಳಿಗೊಮ್ಮೆ ನಿಗದಿತ ಸ್ಥಳದಲ್ಲಿ ಆಯಾ ವಾರ್ಡಿನ ಸದಸ್ಯರೊಂದಿಗೆ ಸಭೆ ನಡೆಸಿ ತಮ್ಮ ವಾರ್ಡಿನ ಸಮಸ್ಯೆಗಳ ನಿವಾರಣೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡರು.

‘ತೆರಿಗೆ ಸಂಗ್ರಹ, ನೀರು ಸರಬರಾಜು, ಚರಂಡಿ ಸ್ವಚ್ಛತೆ ಮತ್ತು ದುರಸ್ತಿ, ವಿದ್ಯುತ್ ಪೂರೈಕೆ ಮೊದಲಾದ ಪುರಸಭೆಯ ಕೆಲಸ ಕಾರ್ಯಗಳಿಗೆ ನೆರೆಹೊರೆ ಗುಂಪಿನ ಪ್ರತಿನಿಧಿಗಳು ಸಹಕಾರ ನೀಡಬೇಕು. ವಾರ್ಡ್ ಪ್ರತಿನಿಧಿಯು ಜನಾದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅಂತಹ ಪ್ರತಿನಿಧಿಯನ್ನು ಬದಲಾಯಿಸಲು ನಡಾವಳಿಯಲ್ಲಿ ಅವಕಾಶವಿದೆ’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ರಫಿಕ್ ಮುಲ್ಲಾ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಜ್ಯೋತಿ ಹಾನಗಲ್ಲ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಟಿ.ಬಿ. ದಂಡಿನ, ಪ್ರಹ್ಲಾದ ಹೊಸಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.