ಮುಂಡರಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹರಿದಿರುವ ತುಂಗಭದ್ರಾ ನದಿ ಪಾತ್ರವು ಸಂಪೂರ್ಣವಾಗಿ ಬರಿದಾಗಿ, ಜನಜೀವನ ಅಸ್ತವ್ಯಸ್ತಗೊಂಡಿತ್ತು. ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ಭದ್ರಾ ಜಲಾಶಯದಿಂದ ಈಗ 0.3 ಟಿಎಂಸಿ ಅಡಿ ನೀರು ಹರಿಸಿದ್ದರಿಂದ ನದಿ ಪಾತ್ರದ ಗ್ರಾಮಗಳ ಜನತೆಯಲ್ಲಿ ಸಂತಸ ಮೂಡಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಸುರಿದಿದ್ದ ಅಲ್ಪ ಮಳೆಗೆ ಬ್ಯಾರೇಜಿನಲ್ಲಿ 1 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಗದಗ-ಬೆಟಗೇರಿ ನಗರಗಳು ಸೇರಿದಂತೆ ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮಗಳಿಗೆ ಸಂಗ್ರಹವಿದ್ದ ನೀರನ್ನು ಈವರೆಗೂ ಪೂರೈಸಲಾಗಿತ್ತು. ಬ್ಯಾರೇಜಿನಲ್ಲಿ ಸಂಗ್ರಹವಿದ್ದ ನೀರು ಸಂಪೂರ್ಣವಾಗಿ ಬರಿದಾಗುವ ಸಂದರ್ಭ ಬಂದಿದ್ದರಿಂದ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುವಂತೆ ಮನವಿ ಮಾಡಿದ್ದವು.
ಪ್ರತಿಯಾಗಿ ಭದ್ರಾ ಜಲಾಶಯದಿಂದ ಮಾರ್ಚ್ 29ರಂದು ನದಿಗೆ 3 ಟಿಎಂಸಿ ಅಡಿ ನೀರು ಬಿಡಲಾಗಿತ್ತು. ಬರಿದಾಗಿದ್ದ ನದಿಯ ಒಡಲನ್ನು ತುಂಬುತ್ತ ಸಾಗಿದ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಕೇವಲ 0.3 ಟಿಎಂಸಿ ಅಡಿ ನೀರು ಮಾತ್ರ ಈಗ ಹಮ್ಮಿಗಿ ಬ್ಯಾರೇಜಿನಲ್ಲಿ ಸಂಗ್ರಹವಾಗಿದೆ.
ನೀರು ಬಿಡಲು ಆಗ್ರಹ: ‘ತುಂಗಭದ್ರಾ ನದಿಯನ್ನು ನಂಬಿಕೊಂಡು ತಾಲ್ಲೂಕಿನ ಸಾವಿರಾರು ರೈತರು ಬೇಸಿಗೆಯಲ್ಲಿ ಭತ್ತ ಹಾಗೂ ಕಬ್ಬನ್ನು ನಾಟಿ ಮಾಡಿದ್ದು, ನದಿ ಪಾತ್ರಕ್ಕೆ ನೀರು ಹರಿಸಬೇಕು’ ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್.ಗೌಡರ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಬಿತ್ತಿದ್ದ ಪೈರೆಲ್ಲ ನೀರಿಲ್ಲದೆ ಒಣಗುತ್ತಿದ್ದು, ನದಿಗೆ ನೀರು ಹರಿಸಿದರೆ ರೈತರು ಬದುಕುತ್ತಾರೆ’ ಎಂದು ತಿಳಿಸಿದರು.
‘ನದಿ ನೀರನ್ನು ಕೇವಲ ಕುಡಿಯುವುದಕ್ಕೆ ಮಾತ್ರ ಬಳಸಬೇಕು ಎಂದು ಹೇಳುವ ಅಧಿಕಾರಿಗಳ ಮಾತಿನಲ್ಲಿ ಅರ್ಥವಿದೆ. ಆದರೆ ಬೇಸಿಗೆಯಲ್ಲಿ ರೈತರ ಜಮೀನುಗಳಿಗೆ ನೀರು ದೊರೆಯದ ವಿಷಯವನ್ನು ಅಧಿಕಾರಿಗಳು ಮೊದಲೆ ರೈತರಿಗೆ ತಿಳಿಸಬೇಕು. ಮುಂಚಿತವಾಗಿ ರೈತರಿಗೆ ತಿಳಿಸಿದರೆ ಅವರು ನಾಟಿ ಮಾಡುವುದರಿಂದ ಹಿಂದೆ ಸರಿಯುತ್ತಿದ್ದರು’ ಎಂದು ತಿಳಿಸಿದರು.
‘ನೀರಾವರಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಗೊಳಿಸದೆ ಇರುವುದರಿಂದ ನಾವು ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳದಂತಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.