ADVERTISEMENT

ಗ್ರಾಮಕ್ಕೆ ನುಗ್ಗಿದ ಕೆರೆ ನೀರು: ಆತಂಕದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 4:49 IST
Last Updated 6 ಸೆಪ್ಟೆಂಬರ್ 2022, 4:49 IST
   

ಡಂಬಳ (ಗದಗ ಜಿಲ್ಲೆ): ಐದು ವರ್ಷಗಳಿಂದ ಶಿಂಗಟಾಲೂರ ಏತ ನೀರಾವರಿ ಯೋಜನೆಯಡಿಯಲ್ಲಿ ಸತತವಾಗಿ ಭರ್ತಿಯಾಗಿರುವ ಡಂಬಳ ಗ್ರಾಮದ ಐತಿಹಾಸಿಕ ಹಿನ್ನೆಲೆಯ ವಿಕ್ಟೋರಿಯಾ ಮಹಾರಾಣಿ ಕೆರೆ(ಗೋಣಸಮುದ್ರ) ಕೋಡಿ ಬಿದ್ದು ಹರಿಯುತ್ತಿದೆ.

ನಾಲ್ಕೈದು ದಿನಗಳಿಂದ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವವುದರಿಂದ ಕೋಡಿ ಬಿದ್ದಿರುವ ನೀರು ಹೆಚ್ಚಿನ ಪ್ರಮಾಣದಲ್ಲಿ ತಗ್ಗು ಪ್ರದೇಶಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯಿಂದ ಅಂದಾಜು 200 ಮೀಟರ್ ಅಂತರದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಬಂಡಿಹಾಳ ಗ್ಯಾಸ್‌ ವಿತರಣಾ ಕೇಂದ್ರವಿದೆ.

ADVERTISEMENT

ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ಹಿಂದುಳಿದ ವರ್ಗದ ವಸತಿ ನಿಲಯಕ್ಕೂ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯ ಕೋಡಿ ಬಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ.ಮನೆಗೂ ನೀರು ನುಗ್ಗಿದೆ. ಗ್ಯಾಸ್‌ ಸಿಲಿಂಡರ್‌ಗಳು ತೇಲಿ ಹೋಗಿವೆ. ನೀರು ವೇಗವಾಗಿ ಹರಿಯುತ್ತಿದೆ. ಮನೆಯ ಹತ್ತಿರವೇ ಬಾಲಕರ ವಸತಿ ನಿಯಲವಿದೆ. ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದನ್ನು ನೋಡಿ ಮಕ್ಕಳು ಆತಂಕದಲ್ಲಿದ್ದಾರೆ. ಹಳೆಯ ಬಸ್ ನಿಲ್ದಾಣ, ಮನೆಗಳು ಹಾಗೂ ರಸ್ತೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ದೊಡ್ಡದಾದ ಕೆರೆ ಎನ್ನುವ ಹೆಗ್ಗಳಿಕೆ ಹೊಂದಿರುವ ಕೆರೆಯು ಭರ್ತಿಯಾದರೆ ಸಮುದ್ರದಂತೆ ಕಾಣುತ್ತದೆ. ಸಾವಿರಾರು ಎಕರೆ ಜಮೀನುಗಳು ನೀರಾವರಿ ಪ್ರದೇಶವಾಗುತ್ತದೆ. ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹಾಗೂ ಕೆರೆಗೂ ಹೆಚ್ಚಿನ ಪ್ರಮಾಣದಲ್ಲಿ ಕಪ್ಪತ್ತಗುಡ್ಡದಿಂದ ಮಳೆಯ ನೀರು ಹರಿದು ಬರುತ್ತಿರುವುದರಿಂದ ನೀರಿನ ಒಳಹರಿವು ಹೆಚ್ಚಳವಾಗಿ ಕೋಡಿ ಬಿದ್ದು ಹೆಚ್ಚು ನೀರು ಬರುತ್ತಿರುವದರಿಂದ ಗ್ರಾಮಕ್ಕೆ ನೀರು ನುಗ್ಗಿರಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪ್ರತ್ಯಕ್ಷೆ ದರ್ಶಿ ನಿಂಗಪ್ಪ ಪ್ಯಾಟಿ ಹಾಗೂ ಬಸೀರಹ್ಮದ ತಾಂಬೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.