
ಗದಗ: ಕೆಲವು ಕಿಡಿಗೇಡಿಗಳು ನೀರು ಸರಬರಾಜು ಪೈಪ್‌ಲೈನ್‌ಗಳಲ್ಲಿ ಕಲ್ಲು, ಬಾಟಲಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ತುಂಬಿ ನೀರು ಸರಬರಾಜು ವ್ಯವಸ್ಥೆಗೆ ಅಡ್ಡಿಪಡಿಸಿರುವ ಪರಿಣಾಮ ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.
ನಗರದ ಭೀಷ್ಮ ಕೆರೆ ಎದುರಿನ ಬನ್ನಿಕಟ್ಟಿ ಹತ್ತಿರದಲ್ಲಿ ಕೆಲವು ದಿನಗಳ ಹಿಂದೆ ನೀರು ಪೈಪ್‌ಲೈನ್ ಮೂಲಕ ಸರಬರಾಜು ಆಗದ ಹಿನ್ನೆಲೆ ಲೈನ್ ತೆರೆಯಿಸಿ ಪರಿಶೀಲನೆ ನಡೆಸಿದಾಗ, ಕಿಡಗೇಡಿಗಳು ನೀರು ಸರಬರಾಜು ಪೈಪ್‌ಲೈನ್‌ನಲ್ಲಿ ದೊಡ್ಡ ಹಾಗೂ ಸಣ್ಣ ಗಾತ್ರದ ಕಲ್ಲುಗಳನ್ನು ತುಂಬಿರುವುದು ಪತ್ತೆಯಾಗಿದೆ. ಈ ಕೃತ್ಯ ದುರುದ್ದೇಶಪೂರ್ವಕವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅದೇರೀತಿ, ಬೆಟಗೇರಿಯ ಮಂಜುನಾಥ ನಗರ ಪ್ರದೇಶದಲ್ಲಿ ಐದು ಇಂಚು ಹಾಗೂ ಎರಡು ಇಂಚು ಲೈನ್‌ಗಳಲ್ಲಿ ಬಾಟಲಿಗಳು ಮತ್ತು ಕಲ್ಲುಗಳು ಸಿಲುಕಿಕೊಂಡ ಪರಿಣಾಮ ನೀರು ಸರಬರಾಜು ಅಸ್ತವ್ಯಸ್ತಗೊಂಡಿದೆ. ಮುಖ್ಯ ಲೈನ್ ತೆರೆಯಿಸಿ ಪರಿಶೀಲಿಸಿದಾಗ ಅನೇಕ ಕಡೆ ಲೈನ್‌ಗಳು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿರುವುದು ಕಂಡು ಬಂದಿದೆ. ಇದರಿಂದ ಹಲವಾರು ಭಾಗಗಳಿಗೆ ನೀರು ಸರಿಯಾಗಿ ತಲುಪುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈ ತರಹದ ಘಟನೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು. ಕಿಡಿಗೇಡಿಗಳ ದುಷ್ಕೃತ್ಯದಿಂದ ಸಾರ್ವಜನಿಕರಿಗೆ ನೀರು ಸರಬರಾಜು ವಿಳಂಬವಾಗಿದ್ದು, ಇದು ಅತ್ಯಂತ ಗಂಭೀರ ವಿಷಯವಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುವ ಇಂತಹ ಕೃತ್ಯಗಳನ್ನು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೀರು ಸರಬರಾಜಿಗೆ ಅಡ್ಡಿಪಡಿಸುವವರ ವಿರುದ್ಧ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಸೇವೆಗೆ ಅಡ್ಡಿಯಾಗುವ ಇಂತಹ ಕೃತ್ಯಗಳನ್ನು ತಡೆಯಲು ಎಲ್ಲರ ಸಹಕಾರ ಅಗತ್ಯವಿದ್ದು ನಗರದ ಸಾರ್ವಜನಿಕರು ಜಾಗೃತಿಯಿಂದ ವರ್ತಿಸಿ ಆಡಳಿತಕ್ಕೆ ಮಾಹಿತಿ ನೀಡಬೇಕು–ಸಿ.ಎನ್.ಶ್ರೀಧರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.