ಶಿರಹಟ್ಟಿ: ‘ಗ್ಯಾರಂಟಿ ಯೋಜನೆ ಕುರಿತು ಟೀಕಿಸುವ ವಿರೋಧ ಪಕ್ಷದವರು ಇಂದು ಅದರ ಯಶಸ್ಸು ಕಂಡು ಅನ್ಯ ರಾಜ್ಯಗಳ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ’ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಬಡವರ ಜೀವನ ಸುಧಾರಿಸುತ್ತಿದೆ. ಯೋಜನೆ ಕುರಿತು ಬೆಂಗಳೂರು ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯವು ಸುಮಾರು 15 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಶೇ 84ರಷ್ಟು ಜನರ ಆರ್ಥಿಕ ಹೊರ ಕಮ್ಮಿಯಾಗಿದೆ ಎಂದು ತಿಳಿದುಬಂದಿದೆ’ ಎಂದರು.
‘ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಅವೈಜ್ಞಾನಿಕ ಎಂದು ವಿರೋಧಿಸುವ ಕೆಲವರು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸೌಲಭ್ಯ ವಂಚಿತ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಸಮೀಕ್ಷೆಯಿಂದ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಕಡಕೋಳ ಗ್ರಾಮದಲ್ಲಿ ಬೀರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ವಿವೇಚನಾ ನಿಧಿಯಿಂದ ₹51 ಲಕ್ಷ, ಕುಸ್ಲಾಪೂರ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಹೆಸ್ಕಾಂ ಮಂಡಳಿ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಮಾಜಿ ಶಾಸಕ ರಾಮಕೃಷ್ನ ದೊಡ್ಡಮನಿ, ಸುಜಾತ ದೊಡ್ಡಮನಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಶರಣಪ್ಪ ಹರ್ಲಾಪೂರ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ವಿ.ವಿ.ಕಪ್ಪತ್ತನವರ, ರುದ್ರಣ್ಣ ಗುಳಗುಳಿ, ಪ್ರಕಾಶ ಕರಿ, ರಾಮಕೃಷ್ಣ ರೊಳ್ಳಿ, ಎಂ.ಎಸ್. ದೊಡ್ಡಗೌಡ್ರ, ತಿಪ್ಪಣ್ಣ ಕೊಂಚಿಗೇರಿ, ಫಕ್ಕೀರಪ್ಪ ಹೆಬಸೂರ, ಮುತ್ತು ಜಡಿ, ಮಂಜುನಾಥ ಜಡಿ, ಭಾಗ್ಯಶ್ರೀ ಬಾಬಣ್ಣ, ಡಿ.ಕೆ. ಹೊನ್ನಪ್ಪನವರ, ಗಿರಿಜವ್ವ ಮುತ್ತಪ್ಪ ಲಮಾಣಿ, ರಾಮಣ್ಣ ಹರ್ಲಾಪೂರ, ರುದ್ರಗೌಡ ಪಾಟೀಲ, ಬಸಮ್ಮ ಮಾದರ, ಬಸವರಾಜ ಪೂಜಾರ, ನಿರ್ಮಲಾ ಅಡವಿ, ಶರಣಪ್ಪ ಹರ್ಲಾಪೂರ, ಶಿವಪ್ಪ ಕದಂ ಇದ್ದರು.
ಎಲ್ಲ ವರ್ಗದವರು ಶೈಕ್ಷಣಿಕವಾಗಿ ಸುಧಾರಣೆ ಕಾಣಬೇಕು. ಗ್ರಾಮದಲ್ಲಿ ಮದ್ಯದ ಅಂಗಡಿ ಬಂದ್ ಮಾಡಿಸಿ ಗ್ರಂಥಾಲಯ ತೆರೆಯಬೇಕು. ಅನಕ್ಷರತೆ ತೊಡೆದು ಹಾಕಲು ಎಲ್ಲರೂ ಶ್ರಮಿಸಬೇಕು.– ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ ಕಾಗಿನೆಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.