ಡಾ.ಯತೀಂದ್ರ ಸಿದ್ದರಾಮಯ್ಯ
ಗದಗ: ‘ರಾಜ್ಯ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
‘ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ ₹50 ಕೋಟಿ ನೀಡಲು ₹8 ಸಾವಿರ ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ ₹2 ಸಾವಿರ ಕೋಟಿ ಇಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎನ್ನುವುದು ತಪ್ಪು. ಗ್ಯಾರಂಟಿ ಯೋಜನೆಗಳು ಐದೂ ವರ್ಷ ಮುಂದುವರಿಯಲಿವೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
‘2013–18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಎಷ್ಟು ಅನುದಾನ ಸಿಗುತಿತ್ತು ಎಂದು ತುಲನೆ ಮಾಡಲಾಗುತ್ತಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಅನುದಾನ ಸಿಗುತ್ತಿತ್ತು ಎಂಬುದನ್ನೂ ನೋಡಬೇಕು. ಬಿಜೆಪಿಯವರಿಗೆ ಹೋಲಿಸಿದರೆ ನಾವು ಅಭಿವೃದ್ಧಿ ಕೆಲಸ ಚೆನ್ನಾಗಿಯೇ ಮಾಡುತ್ತಿದ್ದೇವೆ. ಹೆಚ್ಚು ಅನುದಾನ ಕೊಟ್ಟಿದ್ದೇವೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ, ಮುಖ್ಯಮಂತ್ರಿ ಬದಲಿಸುವುದಾಗಿ ಹೈಕಮಾಂಡ್ ಈವರೆಗೆ ಸೂಚಿಸಿಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅದರರ್ಥ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಗೆ ಪ್ರಕ್ರಿಯೆ ನಡೆದಿದೆ. ರಾಜ್ಯ ಸರ್ಕಾರ ಅಸ್ಥಿರವಾಗಿದೆಯೆಂದು ಅರ್ಥವಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಆಗಿರುತ್ತಾರೆ’ ಎಂದರು.
‘ಬಡ್ತಿ ನೀಡಿ ಸಿಎಂ ಕುರ್ಚಿ ಕಸಿಯುವ ಪ್ಲ್ಯಾನ್’ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತಂದೆ ಸಿದ್ದರಾಮಯ್ಯ ಅವರು ತಮ್ಮ ಇಡೀ ರಾಜಕೀಯ ಜೀವನ ಅಹಿಂದ ಪರ ಹೋರಾಟ ಮಾಡಿದ್ದಾರೆ. ಅವರನ್ನು ಸದಸ್ಯರನ್ನಾಗಿ ಮಾಡಿದರೆ ಮೌಲ್ಯಯುತ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿ ಆ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ’ ಎಂದರು.
‘ಸಿಎಂ ಕಾಂಗ್ರೆಸ್ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂಬ ಆರ್ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಶಾಸಕರು ಹಾಗಂತ ಆರ್. ಅಶೋಕ ಅವರ ಬಳಿ ಹೋಗಿ ಹೇಳಿದ್ರಾ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ನಮ್ಮ ಸರ್ಕಾರ ಬಂದಾಗಿನಿಂದಲೂ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಈಗ ಇಳಿಯುತ್ತಾರೆ, ಮುಂದಿನ ತಿಂಗಳು ಇಳಿಯುತ್ತಾರೆ, ಲೋಕಸಭಾ ಚುನಾವಣೆ, ಮುಡಾ ಪ್ರಕರಣ ಆದ ನಂತರ ಇಳಿದು ಬಿಡುತ್ತಾರೆ ಎನ್ನುತ್ತಲೇ ಇದ್ದಾರೆ. ಆ ರೀತಿ ಯಾವುದೂ ಆಗಿಲ್ಲ. ಆಗುವುದೂ ಇಲ್ಲ’ ಎಂದರು.
ಡಿ.ಕೆ.ಶಿವಕುಮಾರ್ ಪರ ರಂಭಾಪುರಿ ಸ್ವಾಮೀಜಿ ಹೇಳಿಕೆ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಸಾಕಷ್ಟಿದೆ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಬಲವರ್ಧನೆಗೊಳಿಸಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಹಲವಾರು ಕಾರ್ಯಕ್ರಮ ಮಾಡಿದರು. ಕಾರ್ಯಕರ್ತರಿಗೆ ವಿರಾಮವನ್ನೇ ಕೊಟ್ಟಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.