ADVERTISEMENT

ಮುಂಡರಗಿ ಕೀರ್ತಿ ಹೆಚ್ಚಿಸಿದ ಯೋಗ ಮಂಗಳಾ..!

ಆಕಸ್ಮಿಕವಾಗಿ ಯೋಗ ಶಿಬಿರಕ್ಕೆ ಭೇಟಿ; ಬದಲಾಯಿತು ಬದುಕು

ಕಾಶಿನಾಥ ಬಿಳಿಮಗ್ಗದ
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ಮುಂಡರಗಿಯ ಅನಮೋಲ್ ಯೋಗ ಕೇಂದ್ರದಲ್ಲಿ ಯೋಗಾಸಕ್ತರಿಗೆ ಯೋಗ ತರಬೇತಿ ನೀಡುತ್ತಿರುವ ಮಂಗಳಾ ಸಜ್ಜನರ
ಮುಂಡರಗಿಯ ಅನಮೋಲ್ ಯೋಗ ಕೇಂದ್ರದಲ್ಲಿ ಯೋಗಾಸಕ್ತರಿಗೆ ಯೋಗ ತರಬೇತಿ ನೀಡುತ್ತಿರುವ ಮಂಗಳಾ ಸಜ್ಜನರ   

ಮುಂಡರಗಿ: ಪಟ್ಟಣದ ಯುವ ಯೋಗ ಪಟು ಮಂಗಳಾ ಸಜ್ಜನರ (33) ತಮ್ಮ ಯೋಗ ಸಾಧನೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮುಂಡರಗಿ ಪಟ್ಟಣದ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಇಲ್ಲಿ ಅನಮೋಲ್ ಯೋಗ ಕೇಂದ್ರವನ್ನು ತೆರೆದು ನಿತ್ಯಾ ನೂರಾರು ಮಂದಿ ಯೋಗಾಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ.

18 ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದ ಯೋಗ ಶಿಬಿರವೊಂದಕ್ಕೆ ಮಂಗಳಾ ಅವರು ಆಕಸ್ಮಿಕವಾಗಿ ಭೇಟಿ ನೀಡಿದರು. ಈ ಶಿಬಿರವು ಅವರ ಬದುಕು ಬದಲಾಯಿಸಿತು. ನಂತರ ಯೋಗ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಿದರು. 2009ರಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯಿಂದ ಯೋಗ ಡಿಪ್ಲೊಮಾ ಪದವಿ ಪಡೆದುಕೊಂಡರು.

ಬಿಹಾರ, ಪಂಜಾಬ್ ಹಾಗೂ ರಾಜಸ್ಥಾನಗಳಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಹೊರ ಹೊಮ್ಮಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ನಡೆದ ಅಂತರಕಾಲೇಜು ಹಾಗೂ ಅಂತರರಾಜ್ಯ ಸ್ಪರ್ಧೆಗಳಲ್ಲಿ ಪದಕಗಳನ್ನು ಪಡೆದಿದ್ದಾರೆ.ಹರಿಯಾಣ, ತಮಿಳುನಾಡು, ಗೋವಾ ಮೊದಲಾದ ರಾಜ್ಯಗಳಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ.

ADVERTISEMENT

ರಾಜ್ಯ ಮಟ್ಟದ ವಿವಿಧ ಯೋಗ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ಅನಮೋಲ್ ಯೋಗ ಹಾಗೂ ಚಿಕಿತ್ಸಾ ಕೇಂದ್ರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡದಿಂದ ಬಳಲುವವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಮಂಗಳಾ ಅವರ ಪತಿ ಡಾ.ಚಂದ್ರಶೇಖರ ಇಟಗಿ ಅವರು ಯೋಗ ತರಬೇತಿಗೆ ಸಹಕಾರ ನೀಡುತ್ತಿದ್ದಾರೆ.

‘ಯೋಗದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು ಎನ್ನುವ ಛಲವಿದೆ. ಅದಕ್ಕೆ ನಮ್ಮ ಮನೆಯವರೆಲ್ಲ ನೆರವು ನೀಡುತ್ತಿದ್ದು, ಅವರ ಸಹಕಾರದೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಸಾರಿಯಾದರೂ ಪದಕ ಪಡೆಯುತ್ತೇನೆ’ ಎನ್ನುತ್ತಾರೆ ಮಂಗಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.