ADVERTISEMENT

ಕಾಂಗ್ರೆಸ್‌ನಿಂದ ಕೋಮುಸೌಹಾರ್ದತೆಗೆ ಭಂಗ

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 8:39 IST
Last Updated 10 ಏಪ್ರಿಲ್ 2018, 8:39 IST

ಸಕಲೇಶಪುರ: ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಖರ್ಚು ಮಾಡುವ ಹಣದ ಶಕ್ತಿಯನ್ನು, ಜೆಡಿಎಸ್‌ ಜನಶಕ್ತಿಯಿಂದ ತಡೆಯುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಸಕಲೇಶಪುರದಲ್ಲಿ ಸೋಮವಾರ ನಡೆದ ಜೆಡಿಎಸ್‌ ಹಾಗೂ ಬಿಎಸ್‌ಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇಂದು ಜನರಿಗೆ ಬೇಕಾಗಿರುವುದು ಕೋಮು ಸೌಹಾರ್ದತೆ, ಶಾಂತಿ ಸುವ್ಯವಸ್ಥೆಯ ನೆಮ್ಮದಿ ಬದುಕು. ಆ ಬದುಕು ಜೆಡಿಎಸ್‌ ಆಡಳಿತದಿಂದ ಮಾತ್ರ ಸಾಧ್ಯ ಎಂಬುದು ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಈಗಾಗಲೇ ಸಾಬೀತಾಗಿದೆ. ಕಾಂಗ್ರೆಸ್‌ ಆಡಳಿತ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ, ಹಲವು ಮುಗ್ದರು ಜೀವ ಕಳೆದುಕೊಂಡಿದ್ದಾರೆ. ಜೆಡಿಎಸ್‌ ಶಾಸಕರಿರುವ ಕ್ಷೇತ್ರದಲ್ಲಿ ಕೋಮು ಸೌಹಾರ್ದತೆ ಕಾಪಾಡಲಾಗಿದೆ ಎಂದರು.

ADVERTISEMENT

ಸಕಲೇಶಪುರ– ಆಲೂರು– ಕಟ್ಟಾಯ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಶಾಸಕರಾಗಿರುವ ಎಚ್‌.ಕೆ. ಕುಮಾರಸ್ವಾಮಿ ಅವರು ಬೇಲೂರಿನಲ್ಲಿ ಮೂರು ಬಾರಿ ಗೆಲ್ಲುವ ಮೂಲಕ 5 ಬಾರಿ ಶಾಸಕರಾಗಿ ಜಿಲ್ಲೆಯಲ್ಲಿಯೇ ಹೆಚ್ಚು ಬಾರಿ ವಿಧಾನ ಸಭೆಗೆ ಆಯ್ಕೆಯಾದ ಧಕ್ಷ ಹಾಗೂ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್‌ ಮಾತನಾಡಿ, ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಜಿ. ಪರಮೇಶ್ವರ್‌ ಅವರನ್ನು, ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ದಲಿತರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಟೋಪಿ ಹಾಕುವವರಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದರು.

ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿದರು.ಶಾಸಕ ಎಚ್.ಕೆ. ಕುಮಾರಸ್ವಾಮಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್‌, ಲಕ್ಷ್ಮಣ್‌ ಕೀರ್ತಿ, ಸ್ವೀವನ್‌ ಪ್ರಕಾಶ್‌, ಪುರಸಭಾ ಅಧ್ಯಕ್ಷೆ ಪುಷ್ಪಾವತಿ ರಮೇಶ್‌, ಮಾಜಿ ಅಧ್ಯಕ್ಷ ಯಾದ್‌ಗಾರ್‌ ಇಬ್ರಾಹಿಂ, ಎಸ್‌.ಡಿ. ಆದರ್ಶ, ಜಿ.ಪಂ. ಸದಸ್ಯರಾದ ಸುಪ್ರದೀಪ್ತ ಯಜಮಾನ್‌, ಚಂಚಲ ಕುಮಾರಸ್ವಾಮಿ, ಉಜ್ಮಾ ರಿಜ್ವಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡದೀಣೆ ಸ್ವಾಮಿ, ಯುವ ಅಧ್ಯಕ್ಷ ಸ.ಬ. ಭಾಸ್ಕರ್‌, ಬೆಕ್ಕನಹಳ್ಳಿ ನಾಗರಾಜ್‌, ಸಚಿನ್‌ ಪ್ರಸಾದ್‌, ಎಪಿಎಂಸಿ ಅಧ್ಯಕ್ಷ ಬಾಗರಹಳ್ಳಿ ಪುಟ್ಟಸ್ವಾಮಿಗೌಡ, ಮಾಜಿ ಅಧ್ಯಕ್ಷ ಜಾತಳ್ಳಿ ಪುಟ್ಟಸ್ವಾಮಿಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಲ್ಲವಿ ಶ್ರೀನಿವಾಸ್‌, ಸದಸ್ಯ ಹುರುಡಿ ಕುಮಾರಸ್ವಾಮಿ ಇದ್ದರು.

ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತೊರೆದು ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.