ADVERTISEMENT

ಗ್ಯಾಸ್ ಟ್ಯಾಂಕರ್ ಪಲ್ಟಿ; ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:38 IST
Last Updated 3 ಆಗಸ್ಟ್ 2013, 10:38 IST

ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಒಂದು ರಸ್ತೆ ಬದಿಗೆ ಉರಳಿ ಬಿದ್ದು ಸ್ವಲ್ಪ ಕಾಲ ಆತಂಕ ಸೃಷ್ಟಿಸಿದ ಘಟನೆ ಗುರುವಾರ ರಾತ್ರಿ ಹಾಸನ ಬೇಲೂರ ರಸ್ತೆಯ ಕಲ್ಕೆರೆ ಗ್ರಾಮದ ಬಳಿ ಸಂಭವಿಸಿದೆ.

ಅನಿಲ ತುಂಬಿದ್ದ ಲಾರಿ ಹಾಸನದಿಂದ ಬೇಲೂರು ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಲಾರಿ ರಸ್ತೆ ಬದಿಗೆ ಬಿದ್ದ ಕೂಡಲೇ ಅನಿಲ ಸೋರಿಕೆ ಆರಂಭವಾಗಿತ್ತು. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ಸೋರಿಕೆ ತಡೆಯುವಲ್ಲಿ ಯಶಸ್ವಿಯಾದರು.

ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದ್ದರಿಂದ ಕೆಲ ಕಾಲ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾ ಗಿತ್ತು. ಬೇಲೂರು ಕಡೆಗೆ ಹೋಗಬೇಕಾದವರು ಸುತ್ತಿ ಬಳಸಿ ಹೋಗಬೇಕಾಯಿತು.

ಬೇಲೂರು ವರದಿ: ಹಾಸನ- ಬೇಲೂರು ರಸ್ತೆಯ ಕಲ್ಕೆರೆ ತಿರುವಿನಲ್ಲಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಉರುಳಿದ ಪರಿಣಾಮ ಬೇಲೂರು-ಹಾಸನ ನಡುವಿನ ರಸ್ತೆ ಸಂಚಾರ ಸುಮಾರು 15 ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಎದುರಿಸ ಬೇಕಾಯಿತು.

ಗುರುವಾರ ರಾತ್ರಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಲಾರಿ ಕಲ್ಕೆರೆಯ ತಿರುವಿ ನಲ್ಲಿ ಉರುಳಿ ಬಿದ್ದಿತ್ತು. ಲಾರಿಯಲ್ಲಿದ್ದ ಗ್ಯಾಸ್ ಲೀಕ್ ಆಗುತ್ತಿದ್ದ ಕಾರಣ ಗುರುವಾರ ಮುಂಜಾನೆಯಿಂದಲೇ ವಾಹನ ಸಂಚಾರ ಸ್ಥಗಿತಗೊಳಿಸಲಾ ಗಿತ್ತು. ಲಾರಿ ಬಿದ್ದ ಎರಡು ಕಿ.ಮೀ. ವ್ಯಾಪ್ತಿಯಲ್ಲಿನ ಹಳ್ಳಿಯ ಜನರಿಗೆ ಮುನ್ನೆಚ್ಚರಿಕೆಯಾಗಿ ಮನೆಯಲ್ಲಿ ಒಲೆ ಹಚ್ಚದಂತೆ ಸೂಚಿಸಲಾಗಿತ್ತು. ಇದರಿಂದಾಗಿ ಹಳ್ಳಿಗಾಡಿನ ಜನರು ಭಯದಿಂದ ಇರುವಂತಾಯಿತು.

ಬೇಲೂರಿನ ನೆಹರು ನಗರ ವೃತ್ತದಲ್ಲಿ ಹಾಸನಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಲಾ ಗಿತ್ತು. ಹಾಸನದಲ್ಲಿ ತಣ್ಣೀರುಹಳ್ಳ ದಿಂದಲೇ ಬೇಲೂರಿಗೆ ತೆರಳುವ ವಾಹನಗಳನ್ನು ನಿರ್ಬಂಧಿಸಲಾಗಿತ್ತು. ಚಿಕ್ಕಮಗಳೂರು, ಬೇಲೂರು ಮತ್ತು ಮೂಡಿಗೆರೆಗಳಿಂದ ಹಾಸನ, ಮೈಸೂರು ಬೆಂಗಳೂರಿಗೆ ತೆರಳ ಬೇಕಾದ ಪ್ರಯಾಣಿಕರು ಇದರಿಂದ ತೀವ್ರ ತೊಂದರೆ ಎದುರಿಸಿದರು. ಅನಿವಾರ್ಯವಾಗಿ ಹಗರೆ- ಬೈಲಹಳ್ಳಿ-ಕಂದಲಿ ಮಾರ್ಗವಾಗಿ ಮತ್ತು ಬೇಲೂರು- ಹಳೇಬೀಡು -ಅಡಗೂರು ಮಾರ್ಗವಾಗಿ ಹಾಸನ ತಲುಪಬೇಕಾಯಿತು.

ಗುರುವಾರ ರಾತ್ರಿಯೇ ಕಲ್ಕೆರೆ ತಿರುವಿನಲ್ಲಿ ವಾಹನ ಟ್ಯಾಂಕರ್ ಲಾರಿ ಉರುಳಿ ಬಿದ್ದು ಗ್ಯಾಸ್ ಲೀಕ್ ಆಗುತ್ತಿದ್ದರೂ ಗ್ಯಾಸ್ ಲೀಕ್ ಆಗುವುದನ್ನು ತಡೆಗಟ್ಟ ಬೇಕಾದ ಗ್ಯಾಸ್ ಕಂಪನಿಯ ತಾಂತ್ರಿಕ ಸಿಬ್ಬಂದಿ   ಮಧ್ಯಾಹ್ನದವರೆಗೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಮಧ್ಯಾಹ್ನದ ವೇಳೆಗೆ ಸ್ಥಳಕ್ಕಾಗಮಿಸಿದ ತಾಂತ್ರಿಕ ಸಿಬ್ಬಂದಿ ಗ್ಯಾಸ್ ಲೀಕ್ ಆಗುವುದನ್ನು ತಪ್ಪಿಸಿ ಕ್ರೇನ್ ಮೂಲಕ ಲಾರಿಯನ್ನು ಎತ್ತಿ ನಿಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮ ವಾಗಿ ಪೊಲೀಸರು ವಿವಿಧ ರೀತಿಯ ರಕ್ಷಣಾ ಕಾರ್ಯ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.