ಜಾವಗಲ್: `ಬರಪೀಡಿತ ಪ್ರತಿ ತಾಲ್ಲೂಕಿಗೆ ತಲಾ 1 ಕೋಟಿ ರೂ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ಹಾಸನ ಜಿಲ್ಲೆಗೆ ಹೆಚ್ಚುವರಿಯಾಗಿ ರೂ 2.35 ಕೋಟಿ ಬಿಡುಗಡೆ ಮಾಡಲಾಗಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.
ಶಾಲೆಗಾಗಿ ನಾವು-ನೀವು ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಅರಸೀಕೆರೆ ತಾಲ್ಲೂಕು ಜಾವಗಲ್‌ಗೆ ಬಂದಿದ್ದ ಅವರು ತಮ್ಮನ್ನು ಭೇಟಿಮಾಡಿದ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.
`ಹಾಸನ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಈ ತಿಂಗಳ 11 ಮತ್ತು 12ರಂದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗ ಳೊಂದಿಗೆ ಜಿಲ್ಲೆಯ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತೇನೆ ಎಂದರು.
ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಬೇಲೂರು ತಾಲ್ಲೂಕುಗಳಿಗೆ ತಲಾ ರೂ. 40 ಲಕ್ಷ ಹಾಗೂ ಹಾಸನ ತಾಲ್ಲೂಕಿಗೆ 25 ಲಕ್ಷ ರೂಪಾಯಿ, ಸಕಲೇಶಪುರ ತಾಲ್ಲೂಕಿನ ಕಟ್ಟಾಯ ಹೋಬಳಿಗೆ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಇದನ್ನು ಕುಡಿಯುವ ನೀರು ಪೂರೈಕೆ, ದನಕರುಗಳಿಗೆ ಮೇವು ಸೇರಿದಂತೆ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
`ಈ ಹಿಂದೆ ಜಿಲ್ಲೆಗೆ ಬಿಡುಗಡೆ ಮಾಡಿರುವ 3ಕೋಟಿ ರೂಪಾಯಿಯನ್ನೇ ಈವರೆಗೂ ಬಳಕೆ ಮಾಡಿಕೊಂಡಿಲ್ಲ ಎಂಬ ವಿಚಾರವನ್ನು ಸಚಿವರ ಗಮನಕ್ಕೆ ತಂದಾಗ, `ಆ ಹಣವನ್ನೂ ಸೇರಿಸಿ ಒಟ್ಟು ರೂ 5.35ಕೋಟಿಯಲ್ಲಿ ಸಮರೋಪಾದಿ ಯಲ್ಲಿ ಬರಪರಹಾರ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ಮಳೆಯ ಕೊರತೆಯಿಂದ ರೈತರು ಆತಂಕಗೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಪರಸ್ಪರರ ಟೀಕೆ ಮಾಡುವ ಬದಲು ಎಲ್ಲರೂ ಒಟ್ಟಾಗಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದ ಅವರು, ಪರಿಸ್ಥಿತಿಯ ಗಂಭೀರತೆ ಅರಿತು ತಮ್ಮ ವಿವೇಚನೆಗೆ ತಕ್ಕಂತೆ ಹಣವನ್ನು ಬಳಕೆ ಮಾಡುವಂತೆ ಮತ್ತು ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಅಗತ್ಯ ಬಿದ್ದರೆ ನೀರು ಸರಬರಾಜಿಗೆ ಟ್ಯಾಂಕರ್ ಖರೀದಿಸುವಂತೆಯೂ ಸೂಚಿಸಿದರು.
ಶಿಕ್ಷಣಕ್ಕೆ ವಿಶೇಷ ಆದ್ಯತೆ: ಇದಕ್ಕೂ ಮೊದಲು ಶಾಲೆಗಾಗಿ ನಾವು-ನೀವು ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ, `ಕೇರಳ ಹೊರತುಪಡಿಸಿದರೆ ಕರ್ನಾಟಕ ರಾಜ್ಯ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬುದಕ್ಕೆ ಖಾಸಗಿ ವಿದ್ಯಾ ಸಂಸ್ಥೆಗಳು ಪ್ರೇರಣೆಯಾಗಿವೆ. ಸರ್ಕಾರಿ ಶಾಲೆಗಳಿಗೆ ಉತ್ತಮ ಅನುಭವ ಹೊಂದಿರುವ ಹಾಗೂ ನುರಿತ ಶಿಕ್ಷಕರನ್ನು ಸರ್ಕಾರ ಒದಗಿಸುತ್ತಿದೆ. ಶಿಕ್ಷಕರ ಸಂಯಮ, ಶ್ರಮ, ತಾಳ್ಮೆಯಿಂದಾಗಿ ಎಸ್ಸೆಸ್ಸಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಈ ಬಾರಿ 3ನೇ ಸ್ಥಾನ ಪಡೆದಿದೆ. ಮುಂದಿನ ವರ್ಷ ಮೊದಲ ಸ್ಥಾನ ಪಡೆಯುವಂತಾಗಬೇಕು ಎಂದರು.
ವಿದ್ಯೆ ಯಾರ ಮನೆಯ ಸ್ವತ್ತೂಅಲ್ಲ. ವಿದ್ಯೆಯಿಂದ ವ್ಯಕ್ತಿ ತನ್ನ ಅರ್ಹತೆ ಸೃಷ್ಟಿಸಿ ಕೊಳ್ಳಬೇಕು. ಖಾಸಗಿ ವಿದ್ಯಾಸಂಸ್ಥೆಗಳಿಗಿಂತ ವಿಭಿನ್ನವಾದ ಕೆಲಸ ಮಾಡುತ್ತೇವೆ ಎಂದು ಪಣತೊಟ್ಟು ಸರ್ಕಾರಿ ಶಾಲೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 58 `ಮಕ್ಕಳ ಮನೆ~ ಪ್ರಾರಂಭಿದ್ದು, 1450 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೈ.ಎನ್.ರುದ್ರೇಶಗೌಡ, `ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ ಜ್ಞಾನ ಸಂಪಾದನೆ ಮಾಡಬೇಕು~ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎ.ಟಿ.ಚಾಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಪಂಚಾಯಿತಿ ಸದಸ್ಯ ಲಕ್ಷ್ಮಣ್, ಅರಸೀಕೆರೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಾಟಿಕೆರೆ ಪ್ರಸನ್ನ, ಬೇಲೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಕೆ.ಡಿ.ಪಿ. ಸದಸ್ಯ ಪ್ರಭಾಕರ, ರೇಣುಕಾ ಪ್ರಸಾದ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ್, ಬಿಜೆಪಿ ಮುಖಂಡ ಜಾ.ತಿ. ಸತ್ಯನಾರಾಯಣ, ಉಪಾಧ್ಯಕ್ಷ ದೇವರಾಜು ಇದ್ದರು.
ಹಿರೀಸಾವೆ ವರದಿ: ಜನಪ್ರತಿನಿಧಿಗಳು, ಪೋಷಕರು ಶಾಲೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಯಶೋದಬೋಪಣ್ಣ ಹೇಳಿದರು.
ಪಟ್ಟಣದ ಬಾಲಿಕಾ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರವೀಕ್ಷಕಿ ಟಿ.ವಿ.ಭಾನುಮತಿ ಮಾತನಾಡಿ, ಈ ತಿಂಗಳ ಕೊನೆಯೊಳಗೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದರು.
ಶಿಕ್ಷಣ ಸಂಯೋಜಕ ಎಚ್.ಸಿ.ತಮ್ಮಣ್ಣಗೌಡ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಟೆಂಟ್ ಶಾಲೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಜಿ.ಅಂಬಿಕಾರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಶ್ರೀಧರ್, ಉಪಾದ್ಯಕ್ಷೆ ಮೀನಾಕ್ಷಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಜಿ.ಮಂಜುನಾಥ್, ಸದಸ್ಯರಾದ ರಮೇಶ್, ಎಚ್.ಈ.ಬೋರಣ್ಣ, ಜಯಲಕ್ಷಮ್ಮ, ಸಿಆರ್‌ಪಿ ಪ್ರಸನ್ನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ `ಮಕ್ಕಳ ಶಿಕ್ಷಣದ ಹಕ್ಕು ರಕ್ಷಣೆ~ಯ ಪ್ರತಿಜ್ಞೆ ಸ್ವೀಕರಿಸಿದರು. ಮಕ್ಕಳು, ಶಿಕ್ಷಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ `ಸಮುದಾಯದಿಂದ ಶಾಲೆಗೆ ಜಾಥಾ~ ಎಂಬ ಕಾರ್ಯಕ್ರಮ ನಡೆಸಿದರು.
ಸಕಲೇಶಪುರ ವರದಿ: ಐಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮವನ್ನು ಗುರುವಾರ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಪುರುಶೋತ್ತಮ್, ಮುಖ್ಯಶಿಕ್ಷಕ ಕೆ.ಎ.ಲಕ್ಷ್ಮೀಶ್ ಶಾಲಾಭಿವೃದ್ಧಿ ಸಮಿತಿ ಸದಸ್ಯ ಪರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.