ADVERTISEMENT

ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 7:25 IST
Last Updated 8 ಜನವರಿ 2011, 7:25 IST

ಹಾಸನ: ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯವರು ನೀಡಿದ ತೀರ್ಪಿನಿಂದ ಮನನೊಂದು ಗುರುವಾರ ವಿಷ ಸೇವನೆ ಮಾಡಿದ ರೈತರ ವಿರುದ್ಧ ದಾಖಲಿಸಿರುವ ದೂರನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಕಣಕಾಲ್ ಮೂರ್ತಿ, ಮೈಲನಹಳ್ಳಿ ಮಂಜೇಗೌಡ ಮುಂತಾದವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ರೈತರು,  ಅಧಿಕಾರಿಗಳು ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ನ್ಯಾಯಾಧೀಶರ ವಿರುದ್ಧವೇ ಆರೋಪಗಳನ್ನು ಮಾಡಿದರು.

‘ರೈತರು ನ್ಯಾಯಾಲಯದ ಆವರಣದಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿ, ಆಸ್ಪತ್ರೆ ಸೇರಿದ್ದರೂ ಒಬ್ಬನೇ ಒಬ್ಬ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿಲ್ಲ. ಬದಲಿಗೆ ಇವರ ವಿರುದ್ಧವೇ ಪೊಲೀಸರು ದೂರು ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಸೋಮವಾರ ಎಸ್‌ಎಎಸ್ ಸಂಸ್ಥೆಯಿಂದ ರೈತರು ಖರೀದಿಸಿದ್ದ ಎಲ್ಲ ಟ್ರ್ಯಾಕ್ಟರ್‌ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಂದು ಪ್ರತಿಭಟನೆ ನಡೆಸಲಾಗುವುದು ಎಂದರು.

‘ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರು ಟ್ರ್ಯಾಕ್ಟರ್  ತಯಾರಿಕಾ ಸಂಸ್ಥೆ ಹಾಗೂ ಡೀಲರ್ ಅವರ ಆಮಿಷಕ್ಕೆ ಒಳಗಾಗಿರುವುದು ಸ್ಪಷ್ಟವಾಗುತ್ತಿದೆ. 2007ರಲ್ಲಿ ಇದೇ ನ್ಯಾಯಾಧೀಶರು ತೀರ್ಪು ನೀಡಿ, ಟ್ರ್ಯಾಕ್ಟರ್‌ಗಳ ಗುಣಮಟ್ಟ ಚೆನ್ನಾಗಿಲ್ಲ, ಕಂಪನಿಯವರು ರೈತರಿಗೆ ತಲಾ ಒಂದೂ ಮುಕ್ಕಾಲು ಲಕ್ಷ ರೂಪಾಯಿ ಪರಿಹಾರ ನೀಡಬೇಕು’ ಎಂದು ಆದೇಶಿಸಿದ್ದರು.ಅವರೇ ಇಂದು ರೈತರಿಗೆ ಪರಿಹಾರ ನೀಡಬೇಕಿಲ್ಲ ಎಂದಿದ್ದಾರೆ. ಈ ಅವಧಿಯಲ್ಲಿ ಏನೇನು ನಡೆದಿದೆ ಎಂದು ಇದರಿಂದ ಊಹಿಸಬಹುದು. ತೀರ್ಪನ್ನು ವಿರೋಧಿಸಿ ಆತ್ಮಹತ್ಯೆ ಮಾಡುತ್ತೇವೆ ಎಂದು ನ್ಯಾಯಾಧೀಶರ ಮುಂದೆ ಹೋದಾಗಲೂ ಅವರು ರೈತರಿಗೆ ಸಮಾಧಾನ ಹೇಳಿಲ್ಲ’ ಎಂದು ಕಣಕಾಲ್ ಮೂರ್ತಿ ಆರೋಪಿಸಿದರು.

ಗುರುವಾರ ನೀಡಿರುವ ತೀರ್ಪು ಸ್ವೀಕಾರಾರ್ಹವಲ್ಲ. 2007ರಲ್ಲಿ ನೀಡಿರುವ ತೀರ್ಪಿನಂತೆ ಅಂಗದ ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ಒಂದೂ ಮುಕ್ಕಾಲು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಅದಕ್ಕೆ ಶೇ 12ರಷ್ಟು ಬಡ್ಡಿಯನ್ನೂ ನೀಡಬೇಕು, ರೈತರ ಸಾಲ ಮನ್ನಾ ಮಾಡಿ, ಬ್ಯಾಂಕ್‌ಗಳಲ್ಲಿರುವ ಪಹಣಿಯನ್ನು ವಾಪಸ್ ಕೊಡಬೇಕು ಹಾಗೂ ರೈತರ ಮೇಲೆ ಹಾಕಿರುವ ಕೇಸನ್ನು ರದ್ದು ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.