ADVERTISEMENT

ಡಿ.ಸಿ ವರ್ಗಾವಣೆಗೆ ಕಾಂಗ್ರೆಸ್ ಹುನ್ನಾರ

ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ಗೆ ಪತ್ರ ಬರೆದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 8:42 IST
Last Updated 12 ಏಪ್ರಿಲ್ 2018, 8:42 IST

ಹಾಸನ: ‘ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ವರ್ಗಾವಣೆ ಮಾಡಿ ಚುನಾವಣೆಯಲ್ಲಿ ಅಕ್ರಮ ಎಸಗಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಆರೋಪಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಅವರಿಗೆ ಬುಧವಾರ ಪತ್ರ ಬರೆದಿರುವ ಅವರು, ‘ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವ ಎ,ಮಂಜು ಅವರು ತಮ್ಮ ಸ್ವಾರ್ಥಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಂಡು ರೋಹಿಣಿ ವಿರುದ್ಧ ತಮ್ಮ ಪಕ್ಷದ ಕಾರ್ಯಕರ್ತರಿಂದ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿ, ವರ್ಗಾವಣೆ ಮಾಡಿಸಿ ಅಕ್ರಮ ಎಸಗಲು ಮುಂದಾಗಿದ್ದಾರೆ’ ಎಂದು ದೂರಿದ್ದಾರೆ.

‘ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರವಾಸಿ ಮಂದಿರದಲ್ಲಿ ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಮಂಜು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅರಕಲಗೂಡಿನಲ್ಲಿ ದಿನಾಂಕವನ್ನು ತಿದ್ದಿ ಫಲಾನುಭವಿಗಳಿಗೆ ಬಗರ್‌ಹುಕುಂ ಯೋಜನೆಯಡಿ ಸಾಗುವಳಿ ಪತ್ರ ನೀಡಲಾಗಿದೆ. ಹಾಗಾಗಿ ತಹಶೀಲ್ದಾರ್‌ ಅವರನ್ನು ಅಮಾನತುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಡಿ.ಸಿ ಪತ್ರ ಬರೆದಿದ್ದಾರೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಈ ಎಲ್ಲಾ ತೀರ್ಮಾನಗಳನ್ನು ಜಿಲ್ಲಾಧಿಕಾರಿ ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಮಣಿಯದೆ, ನಿಷ್ಪಕ್ಷಪಾತವಾಗಿ ತೆಗೆದುಕೊಂಡಿದ್ದಾರೆ. ಆದರೆ, ಹಾಸನ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಡಿ.ಸಿ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿರುವುದು ದುರುದ್ದೇಶ ಪೂರಕವಾಗಿದೆ’ ಎಂದು ಹೇಳಿದ್ದಾರೆ.

‘ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ ಎಂಬುದು ಇತ್ತೀಚೆಗೆ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವದಿಂದ ತಿಳಿಯುತ್ತದೆ. ಡಿ.ಸಿ ವರ್ಗಾವಣೆ ಮಾಡಿದಲ್ಲಿ ಅರಕಲಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಹಣ ಹಾಗೂ ಹೆಂಡ ಹಂಚುವ ಮೂಲಕ ಚುನಾವಣೆ ನಡೆಸಲು ಮಂಜು ಮುಂದಾಗುತ್ತಾರೆ. ಆದ್ದರಿಂದ ಕಾಂಗ್ರೆಸ್ ಪದಾಧಿಕಾರಿಗಳ ಒತ್ತಾಯಕ್ಕೆ ಮಣಿಯದೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.