ADVERTISEMENT

ತೊದಲುನುಡಿಗಳ ನಮನ...

ಹಿ.ಕೃ.ಚಂದ್ರು
Published 7 ಡಿಸೆಂಬರ್ 2013, 8:44 IST
Last Updated 7 ಡಿಸೆಂಬರ್ 2013, 8:44 IST

ಹಿರೀಸಾವೆ: ‘ಕುಂಬಳಕಾಯಿ ದಪ್ಪ, ಮೆಣಸಿನಕಾಯಿ ಖಾರ, ಕ್ಯಾರೆಟ್ ಸಿಹಿ, ಹಿರೇಕಾಯಿ ಉದ್ದವಾಗಿ ಮಾಡಿದ ದೇವರಿಗೆ ನಮನಗಳು...’ ಎಂಬ ಹಾಡು ಚಿಣ್ಣರ ಬಾಯಲ್ಲಿ ತೊದಲುನುಡಿಯಾಗಿ ಹರಿಯಿತು...

ಚೌಡೇಶ್ವರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜುಟ್ಟನಹಳ್ಳಿ ವೃತ್ತದ ಅಂಗನವಾಡಿ ಕೇಂದ್ರಗಳ ಮಕ್ಕಳ ಬಾಲಮೇಳ ಅರ್ಥ ಪೂರ್ಣವಾಗಿತ್ತು. 23 ಅಂಗನವಾಡಿ  ಪುಟಾಣಿಗಳು ಭಾಗವಹಿಸಿದ್ದರು. ಭಾವಗೀತೆ, ಜನಪದಗೀತೆ, ಛದ್ಮವೇಶ, ಕತೆ ಮತ್ತು ಇಂಗ್ಲಿಷ್ ಪದ್ಯ ಹಾಡುವುದೂ ಸೇರಿದಂತೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನೀಡುವ ಮೂಲಕ ಸಾರ್ವಜನಿಕರನ್ನು ರಂಚಿಸಿದರು.

ವೇದಿಕೆಯ ಮೇಲೆ ಸಣ್ಣ ಮಕ್ಕಳು ಅಳುಕದೆ ನೃತ್ಯ ಮಾಡುವುದನ್ನು ಕಂಡ ಪೋಷಕರ ಸಂತೋಷಗೊಂಡರು. ಕೃಷ್ಣ, ರಾಧೆ, ಗೃಹಿಣಿ ಸೇರಿದಂತೆ ಹಲವು ನಾಯಕರ ಛದ್ಮವೇಶಗಳನ್ನು ಮಕ್ಕಳು ಧರಿಸಿದ್ದರು. ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ಉತ್ತಮವಾಗಿ ಕಲಿತಿರುವ ನಾಲ್ಕು ಮಕ್ಕಳನ್ನು ಅಂಗನವಾಡಿ ಕಾರ್ಯ ಕರ್ತೆಯರು ಬಾಲಮೇಳಕ್ಕೆ ಅಯ್ಕೆ ಮಾಡಿ ಕರೆತಂದು, ಅವರ ಪ್ರತಿಭೆಯ ಪ್ರದರ್ಶನ ಮಾಡಲಾಗುತ್ತದೆ.

3 ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗೆ ಪರ್ವ ಶಿಕ್ಷಣದ ಜೊತೆಗೆ ಹಾಡು ಕತೆಗಳನ್ನು ಕಲಿಸಲಾಗುತ್ತದೆ. ಪ್ರತಿ ವೃತ್ತದಲ್ಲಿ ಇರುವ ಎಲ್ಲ ಅಂಗನವಾಡಿಗಳ ಮಕ್ಕಳನ್ನು ಒಂದು ವೇದಿಕೆಗೆ ಕರೆತಂದು  ಅವರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಲಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಗಂಗಪ್ಪಗೌಡ.
ಹಿರೀಸಾವೆಯ ಚೌಡೇಶ್ವರಿ ಸ್ಟೋರ್‌ನ ಮಾಲೀಕರಾದ ಹರೀಶ್ ನೆನಪಿನ ಕಾಣಿಕೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.