ADVERTISEMENT

ದಲಿತರ ಸಾಮಾಜಿಕ: 19ರಿಂದ ಅರಕಲಗೂಡಿನಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:15 IST
Last Updated 14 ಅಕ್ಟೋಬರ್ 2011, 5:15 IST

ಹಾಸನ:  `ರಾಜ್ಯದ ವಿವಿಧೆಡೆ ದಲಿತರ ಮೇಲೆ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂಥ ಘಟನೆ ಹೆಚ್ಚುತ್ತಲೇ ಇವೆ. ಇದು ಅನಿಷ್ಟ ಪದ್ಧತಿ ಮಾತ್ರವಲ್ಲದೆ ಪರೋಕ್ಷವಾಗಿ ದೇಶದ ಏಕತೆಗೂ ಧಕ್ಕೆ ಉಂಟುಮಾತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಜನರೂ ಕುಳಿತು ಚಿಂತನೆ ಮಾಡಬೇಕಾಗಿದ್ದು. ಇದೇ ಅ.19ರಿಂದ 22ರ ವರೆಗೆ ಅರಕಲಗೂಡಿನಿಂದ ಹಾಸನ ವರೆಗೆ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ~ ಎಂದು ಬಹುಜನ ಸಮಾಜ ಪಕ್ಷದ ಮುಖಂಡ ಎನ್. ಮಹೇಶ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ನಾಗಮಂಗಲ, ಪಿರಿಯಾಪಟ್ಟಣ ಮುಂತಾದ ಪ್ರದೇಶಗಳಿಂದ ಈಚೆಗೆ ಹಲವು ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿವೆ. ಹಾಸನ ಜಿಲ್ಲೆಯಲ್ಲಿ ಈ ವರೆಗೆ 77 ಪ್ರಕರಣ ದಾಖಲಾಗಿವೆ. ಆದರೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಈಚೆಗೆ ಸಿದ್ದಾಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಒಬ್ಬರಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೇ ಊರವರು ನಿಷೇಧ ಹೇರಿದ್ದು, ವ್ಯವಸ್ಥೆಯನ್ನೇ ಅಣಕಿಸುವಂತೆ ಗೋಚರಿಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ ದೌರ್ಜನ್ಯ ತಡೆ ಕಾಯ್ದೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ ಎಂದರು.

ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆಯುತ್ತಿದ್ದರೂ ಪ್ರಗತಿಪರ ಸಂಘಟನೆಗಳು ಸುಮ್ಮನೆ ಕುಳಿತಿವೆ. ಅಷ್ಟೇ ಅಲ್ಲ ತಮ್ಮ ಕ್ಷೇತ್ರದಲ್ಲಿಯೇ ಇಂಥ ಘಟನೆ ನಡೆಯುತ್ತಿರುವ ಬಗ್ಗೆ ಸಂಸದ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಏನನ್ನಿಸುತ್ತದೆ? ಶಾಸಕ ಎ. ಮಂಜು ಮತ್ತು ಉಸ್ತುವಾರಿ ಸಚಿವ ಸೋಮಣ್ಣ ಅವರು ಘಟನೆ ಸಂಬಂಧ ಮಾತನಾಡಬೇಕು. ಒಂದು ವೇಳೆ ಇದು ಅನಿಷ್ಟ ಪದ್ಧತಿ ಎಂಬುದನ್ನು ಅವರು ಒಪ್ಪುವುದಾದರೆ ಅವರು ಮೊದಲು ತಮ್ಮ ಸಮಾಜದ ಜನರನ್ನು ಭೇಟಿ ಮಾಡಿ ಬುದ್ಧಿ ಹೇಳಬೇಕು ಎಂದರು.

ಇಂಥ ಪದ್ಧತಿ ಬಿಡುವಂತೆ ಒತ್ತಾಯಿಸುವುದು ಮತ್ತು ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಮಾಡುವ ಉದ್ದೇಶದಿಂದ `ದೌರ್ಜನ್ಯ ಮುಕ್ತ ಸಮಾಜದೆಡೆಗೆ ನಮ್ಮ ನಡಿಗೆ~ ಘೋಷವಾಕ್ಯದೊಡನೆ ಪಾದಯಾತ್ರೆ ನಡೆಸುತ್ತಿದ್ದೇವೆ. ದಲಿತ ಸಂಘಟನೆಗಳು, ಬಿಎಸ್‌ಪಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳು ನಮಗೆ ಬೆಂಬಲ ನೀಡುತ್ತಿವೆ. 19ರಂದು ಈಚೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಸಿದ್ದಾಪುರ ಗ್ರಾಮದಿಂದಲೇ ಪಾದಯಾತ್ರೆ ಆರಂಭಿಸಲಾಗುವುದು. 22ರಂದು ಬೆಳಿಗ್ಗೆ 11  ಗಂಟೆಗೆ ಹಾಸನದಲ್ಲಿ ರ‌್ಯಾಲಿ ಹಾಗೂ ಜಿಲ್ಲಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಪಾದಯಾತ್ರೆ ಕೊನೆಗೊಳಿಸಲಾಗುವುದು~ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಎ.ಪಿ. ಅಹಮ್ಮದ್, ತಿರುಪತಿಹಳ್ಳಿ ದೇವರಾಜ್, ವಿಜಯ ಕುಮಾರ್, ಸ್ಟೀಫನ್ ಪ್ರಕಾಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.