ADVERTISEMENT

ನಗರ ಸಭೆ: 61.18 ಕೋಟಿ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 6:55 IST
Last Updated 22 ಮಾರ್ಚ್ 2011, 6:55 IST

ಹಾಸನ: ‘ಬಜೆಟ್ ಕುರಿತ ಸಭೆಯ ಸಿಂಧುತ್ವವನ್ನೇ ಪ್ರಶ್ನಿಸಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿ ಸಭಾತ್ಯಾಗ ಮಾಡಿದ ಬಳಿಕ ನಗರಸಭೆಯ ಅಧ್ಯಕ್ಷ ಸಿ.ಆರ್. ಶಂಕರ್ 2011-12ನೇ ಸಾಲಿನ 61.18 ಕೋಟಿ ರೂಪಾಯಿ ಬಜೆಟ್ ಮಂಡಿಸಿದರು. ಗೊರೂರಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ಕಳೆದ ವರ್ಷದ 2.63 ಕೋಟಿ ಶಿಲ್ಕು ಸೇರಿದಂತೆ ಒಟ್ಟಾರೆ 17.90 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಬಹುಮತದಿಂದ ಅಂಗೀಕರಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಒಟ್ಟು 58,72,90,000 ರೂಪಾಯಿ ಆದಾಯ ನಿರೀಕ್ಷಿಸಲಾಗಿದ್ದು 61,18,00,000  ರೂಪಾಯಿ ವೆಚ್ಚ ತೋರಿಸಲಾಗಿದೆ. ಒಟ್ಟಾರೆ ಆದಾಯದಲ್ಲಿ ವಿವಿಧ ಯೋಜನೆಗಳ ಅನುದಾನದ ರೂಪದಲ್ಲಿ 41.53 ಕೋಟಿ ರೂಪಾಯಿ ನಿರೀಕ್ಷಿಸಲಾಗಿದೆ. ಉಳಿದಂತೆ 9 ಕೋಟಿ ರೂಪಾಯಿ ಆಸ್ತಿ ತೆರಿಗೆ ಮೂಲಕ ಸಂಗ್ರಹವಾಗಲಿದೆ. ಅಭಿವೃದ್ಧಿ ಶುಲ್ಕದ ರೂಪದಲ್ಲಿ 44ಲಕ್ಷ, ಅಂಗಡಿ ಮಳಿಗೆಗಳ ಬಾಡಿಗೆ ಮೂಲಕ 42 ಲಕ್ಷ, ನೀರು ಸರಬರಾಜು ಮೂಲಕ 2ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ 58,72,00,000 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಇದರಲ್ಲಿ ರಸ್ತೆಬದಿ ಚರಂಡಿ ನಿರ್ಮಾಣಕ್ಕೆ ಗರಿಷ್ಠ 8 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಸ್ತೆ ನಿರ್ಮಾಣ, ರಸ್ತೆಗಳ ಉನ್ನತೀಕರಣ, ಡಾಂಬರೀಕರಣ ಹಾಗೂ ಫುಟ್‌ಪಾತ್  ನಿರ್ಮಾಣಕ್ಕೆ ಮೀಸಲಿಟ್ಟ ಹಣ ಏಳು ಕೋಟಿ ರೂಪಾಯಿ. ಕಳೆದ ಬಾರಿ ಪಾರ್ಕ್ ಅಭಿವೃದ್ಧಿಗೆ 1.25 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅದರಲ್ಲಿ ವೆಚ್ಚವಾಗಿರುವ ಪ್ರಮಾಣ ಅತಿ ಕಡಿಮೆ. ಈ ಬಾರಿಯೂ ಪಾರ್ಕ್ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಹೊಸ ಬಡಾವಣೆಗಳ ಅಭಿವೃದ್ಧಿಗೆ ಮೂರು ಕೋಟಿ, ಕೊಳಚೆ ಪ್ರದೇಶ ಅಭಿವೃದ್ಧಿ ಹಾಗೂ ನೀರು ಸರಬರಾಜು ಕೆಲಸಗಳಿಗೆ ತಲಾ 2 ಕೋಟಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರು ಸರಬರಾಜು ಮೀಟರ್ ಅಳವಡಿಸಲು 2.60ಕೋಟಿ ವಾಹನ ಖರೀದಿಗೆ 40 ಲಕ್ಷ ಹೀಗೆ ವಿವಿಧ ಬಾಬ್ತುಗಳಿಗೆ 61,18,00,000 ರೂಪಾಯಿ ವೆಚ್ಚ ನಿಗದಿ ಮಾಡಲಾಗಿದೆ.
ಸಭೆಯ ಸಿಂಧುತ್ವ ಪ್ರಶ್ನಿಸಿ ಮತ್ತು ಬಜೆಟ್  ಪೂರ್ವದಲ್ಲಿ ಎರಡು ಸುತ್ತಿನ ನಾಗರಿಕ ಸಭೆಯನ್ನು ನಡೆಸದಿರುವುದನ್ನು ವಿರೋಧಿಸಿ ವಿರೋಧಪಕ್ಷದ ಸದಸ್ಯರು ಸಭೆಯಿಂದ ಹೊರನಡೆದ ಬಳಿಕ ಕೇವಲ 10 ನಿಮಿಷಗಳಲ್ಲಿ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಯಿತು.

67 ವಿಷಯಗಳಿಗೂ ಒಪ್ಪಿಗೆ
ಕಳೆದ ಹಲವು ತಿಂಗಳುಗಳಿಂದ ಸಾಮಾನ್ಯ ಸಭೆ ನಡೆಯದ ಕಾರಣ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆಗಾಗಿ 67 ವಿಷಯಗಳನ್ನು ಹಾಗೂ ಆರು ತಿಂಗಳ ಜಮಾ ಖರ್ಚು ವಿವರಗಳನ್ನೂ ಒದಗಿಸಲಾಗಿತ್ತು. ವಿರೋಧ ಪಕ್ಷದವರು ‘ಈ ವಿವರಗಳನ್ನು ಮೊದಲೇ ಕೊಡಬೇಕಿತ್ತು, ಸಭೆಗೆ ಬಂದ ಮೇಲೆ ಕೊಟ್ಟರೆ ಚರ್ಚೆ ನಡೆಸುವುದಾದರೂ ಹೇಗೆ ?’ಎಂದು ಪ್ರಶ್ನಿಸಿದರು. ಕೊನೆಗೆ ಗದ್ದಲವಾಗಿ ಸಭೆಯಿಂದ ಹೊರನಡೆದರು. ಬಳಿಕ ಕೆಲವೇ ಕ್ಷಣಗಳಲ್ಲಿ ಎಲ್ಲ ವಿಷಯಗಳನ್ನೂ ಅಂಗೀಕರಿಸಲಾಯಿತು.

ಕೋತಿ ಹಿಡಿಯಲು ಹತ್ತು ಲಕ್ಷ
ನಗರಸಭೆಯಲ್ಲಿ ಈ ಬಾರಿ ಕೋತಿಗಳನ್ನು ಹಿಡಿದು ಸಾಗಿಸುವ ಸಲುವಾಗಿಯೇ ಹತ್ತು ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಹಾಸನ ನಗರದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿರುವ ಬಗ್ಗೆ ಕಳೆದ ವರ್ಷ ಸಾಕಷ್ಟು ದೂರುಗಳು ಬಂದಿದ್ದವು. ಅದರಂತೆ ನೂರಾರು ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆಯನ್ನೂ ಮಾಡಲಾಗಿತ್ತು. 2011-12ನೇ ಸಾಲಿನ ಬಜೆಟ್‌ನಲ್ಲೂ ಇದಕ್ಕೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ (ಕಳೆದ ವರ್ಷ 20ಲಕ್ಷ ಇಡಲಾಗಿತ್ತು). ಆದರೆ ಇದೇ ಮೊದಲಬಾರಿ ಕೋತಿಗಳ ನಿಯಂತ್ರಣಕ್ಕೆ ಇಷ್ಟೊಂದು ದೊಡ್ಡ ಮೊತ್ತ ಮೀಸಲಿಡಲಾಗಿದೆ.

ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಲು 10 ಲಕ್ಷ ರೂಪಾಯಿ ಇಡಲಾಗಿದೆ. ಆದರೆ ‘ಹಾಸನ ಹಬ್ಬಕ್ಕೆ’ ಇಟ್ಟಿರುವುದು 5ಲಕ್ಷ ರೂಪಾಯಿ. ಹಾಸನದ ಪ್ರಸಿದ್ಧ ಜನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ನೀಡಲು ಪ್ರತಿವರ್ಷದಂತೆ 50ಸಾವಿರ ರೂಪಾಯಿಯನ್ನಷ್ಟೇ ಮೀಸಲಿಡಲಾಗಿದೆ. ಸ್ವಾಗತ ಕಮಾನು ನಿರ್ಮಾಣಕ್ಕೆ (ಸ್ಥಳ ನಿಗದಿ ಸೂಚಿಸಿಲ್ಲ) 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.