ADVERTISEMENT

ಹಾಸ್ಟೆಲ್ ಮುಂದೆ ಕೊಚ್ಚೆಗುಂಡಿ: ಸಮಿತಿ ಆಕ್ರೊಶ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:58 IST
Last Updated 1 ಜುಲೈ 2013, 5:58 IST

ಹಳೇಬೀಡು: ಪಟ್ಟಣದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಮಕ್ಕಳಿಗೆ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಭಾನುವಾರ ವೀಕ್ಷಣೆ ನಡೆಸಿತು.

ಖಾಸಗಿ ಕಟ್ಟಡದಲ್ಲಿರುವ ಹಾಸ್ಟೆಲ್‌ನಲ್ಲಿ ಅಡುಗೆ ಕೋಣೆಯ ಒಂದು ಪಕ್ಕ ಶೌಚಾಲಯ ಮತ್ತೊಂದು ಕಡೆ ಜಾನು ವಾರು ಕೊಟ್ಟಿಗೆ ಇದ್ದು, ಕೋಣೆಯ ಮುಂದೆ ಕೊಚ್ಚೆ ನಿಂತು ಸೊಳ್ಳೆಯ ತಾಣ ವಾಗಿರುವುದು ತಂಡದ ಗಮನಕ್ಕೆ ಬಂತು.

`ಬಟ್ಟೆ ತೊಳೆದು ಒಣಗಿಸಲು ಸ್ಥಳವ ಕಾಶವಿಲ್ಲ. ಸೊಳ್ಳೆ ಕಾಟ ಹೇಳತೀರದು. ಎಲ್ಲರೂ ಕುಳಿತುಕೊಳ್ಳಲು ಹಾಗೂ ಮಲಗಲು ಸ್ಥಳದ ಕೊರತೆಯಾಗಿದೆ' ಎಂದು ಮಕ್ಕಳು ದೂರಿದರು.

ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ 65 ಮಕ್ಕಳ ಪೈಕಿ 25 ಮಕ್ಕಳು ಹಾಸ್ಟೆಲ್‌ನಲ್ಲಿದ್ದರು. ಉಳಿ ದವರು ಅನುಮತಿ ಪಡೆದು ತಮ್ಮ ಊರುಗಳಿಗೆ ತೆರಳಿದ್ದರು.

ಬೇಲೂರಿನಲ್ಲಿ ವಾಸವಾಗಿರುವ ವಾರ್ಡನ್ ಹಾಸ್ಟೆಲ್‌ಗೆ ಆಗಮಿಸಿರಲಿಲ್ಲ. ಹೀಗಾಗಿ ತಂಡ ಅಡುಗೆಯವರಿಂದ ಮಾಹಿತಿ ಪಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹಾಸ್ಟೆಲ್ ಸ್ಥಳಾಂತರ ಮಾಡಲಾಗು ವುದು ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಸುಬಾನ್ ತಿಳಿಸಿದರು.

ಹಾಸ್ಟೆಲ್‌ಗೆ ಬಾಡಿಗೆ ಕೊಟ್ಟು ಮನೆಗೆ ಸಾಕಷ್ಟು ಹಾನಿಯಾಗಿದೆ ನಷ್ಟ ತುಂಬಿ ಕೊಟ್ಟರೆ ಸ್ಥಳಾಂತರಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಮಾಲೀಕ ಮಂಜುನಾಥ್ ತಿಳಿಸಿದರು.

ಹಾಸ್ಟೆಲ್‌ಗೆ ಹೊಸ ಕಟ್ಟಡ ನೋಡಿದ್ದರೂ ಶಾಸಕ ವೈ.ಎನ್. ರುದ್ರೇಶಗೌಡರು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಾಂತರಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ದಲಿತ ಸಂಘರ್ಷ ಸಮಿತಿಯ ಸಹಕಾರದೊಂದಿಗೆ ಮಕ್ಕಳನ್ನು ತಮ್ಮ ಲಗೇಜು ಸಮೇತ ಕರೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿ ಹಾಗೂ ದಲಿತ ಮುಖಂಡ ಪರ್ವತಯ್ಯ ಎಚ್ಚರಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.