ADVERTISEMENT

ಅಲ್ಪಾವಧಿ ದ್ವಿದಳ ಧಾನ್ಯ ಬೆಳೆದು ಹಣ ಸಂಪಾದಿಸಿ

ಬೆಳೆ ಪರಿವರ್ತನೆಯಿಂದ ರೋಗ, ಕೀಟಗಳ ಉಪಟಗಳ ಕಡಿಮೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:12 IST
Last Updated 22 ಡಿಸೆಂಬರ್ 2019, 14:12 IST
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.   

ಹಾಸನ: ‘ಅಲ್ಪಾವಧಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಅಲಸಂದೆ ಹಾಗೂ ಹಸಿರು ತರಕಾರಿಗಳನ್ನು ಬೆಳೆದು ಹಣ ಸಂಪಾದಿಸಬಹುದು. ಬೆಳೆ ಪರಿವರ್ತನೆ ಆಗುವುದರಿಂದ ರೋಗ, ಕೀಟಗಳ ಉಪಟಳ ಕಡಿಮೆ ಮಾಡಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಳೆಯಾಶ್ರಿತ ಪ್ರದೇಶದಲ್ಲಿ ಉದ್ಯೋಗ ಖಾತ್ರಿ, ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಿಸಿ, ಹೊಂಡದ ಸುತ್ತ ಸೊಪ್ಪು, ತರಕಾರಿಗಳು ರೈತರಿಗೆ ಆರ್ಥಿಕ ಲಾಭ ತಂದು ಕೊಡುತ್ತವೆ. ಜಮೀನು ಮತ್ತು ತೆಂಗಿನ ತೋಟದಲ್ಲಿ ಕಂದಕ ಬದು ತೆಗೆಯುವುದರಿಂದ ನೀರು ಇಂಗಲು ಸಹಕಾರಿಯಾಗುತ್ತದೆ. ಅಂತರ್ಜಲ ಹೆಚ್ಚುವುದರ ಜತೆಗೆ ಮಣ್ಣಿನ ಸವಕಳಿ ತಡೆಯಬಹುದು’ ಎಂದು ಹೇಳಿದರು.

ತರಕಾರಿ ಬೆಳೆ 1 ರಿಂದ 3 ತಿಂಗಳು, ಸೊಪ್ಪು 60 ದಿನಗಳಲ್ಲಿ ಕೈಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೊತ್ತಂಬರಿ 3 ಕಟ್ಟಿಗೆ ₹ 10 ದರ ಇದೆ. ಮಾರುಕಟ್ಟೆಗೆ ಅನುಗುಣವಾಗಿ ಸೊಪ್ಪು, ತರಕಾರಿ ಬೆಳೆಯಬೇಕು. ಉದ್ಯೋಗ ಖಾತ್ರಿಯಲ್ಲಿ 15*15 ಮೀಟರ್‌ ಕೃಷಿ ಹೊಂಡ ನಿರ್ಮಿಸಿದರೆ 4.90 ಲಕ್ಷ ಲೀಟರ್‌ ನೀರು ಸಂಗ್ರಹವಾಗುತ್ತದೆ. ಇದು ಒಂದು ಎಕರೆ ಜಮೀನಿಗೆ ತುಂತುರು ನೀರಾವರಿ ಮೂಲಕ ಎರಡು ಬಾರಿ ನೀರು ಕೊಡಬಹುದು. ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಕೃಷಿ ತ್ಯಾಜ್ಯ ಬಳಸಿ ಉತ್ತಮ ಎರೆಹುಳು ಗೊಬ್ಬರ ಮಾಡಬಹುದು ಎಂದು ಸಲಹೆ ನೀಡಿದರು.

ADVERTISEMENT

‌ಭತ್ತ ಕೊಯ್ಲಿನ ನಂತರ ಉಳಿದಿರುವ ತೇವಾಂಶದಲ್ಲಿ ದ್ವಿದಳ ಧಾನ್ಯ ಬೆಳೆಯಬಹುದು. ಮತ್ತೊಮ್ಮೆ ನಾಟಿ ಮಾಡುವ ವೇಳೆಗೆ ಭೂಮಿ ಫಲವತ್ತಾಗಿರುತ್ತದೆ. ಒಂದೇ ಬೆಳೆ ನೆಚ್ಚಿಕೊಳ್ಳದೇ ಕಾಲಕ್ಕೆ ತಕ್ಕಂತೆ ಬೆಳೆ ಹಾಕುವುದರಿಂದ ಕೃಷಿಯನ್ನು ಹೆಚ್ಚು ಉತ್ಪಾದಕ ಕ್ಷೇತ್ರವನ್ನಾಗಿ ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ 2.50 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 2.11 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. 82 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ , 62 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಹಾಗೂ ಭತ್ತ 43 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಬೆಳೆಯಲಾಗಿದೆ. ಏಪ್ರಿಲ್‌, ಮೇ ಮೊದಲ ವಾರ ಮಳೆಯಾಗದ ಕಾರಣ ದ್ವಿದಳ ಧಾನ್ಯ ಕಡಿಮೆ ಆಯಿತು. ಎರಡು ವರ್ಷದಿಂದ ಮುಸುಕಿನ ಜೋಳದಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ. ಇಮಿಮೇಕ್ಟೆ ಬಿನ್ಸ್‌ಯೇಟ್‌ಯನ್ನು .4 ಗ್ರಾಂ ಔಷಧಿಯನ್ನು ಸುಳಿಗೆ ಸಿಂಪಡನೆ ಮಾಡಿದರೆ ಹತೋಟಿಗೆ ತರಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಚಿಯ ಬೆಳೆ ಕುರಿತು ರೈತರು ಮಾಹಿತಿ ಕೇಳುತ್ತಿದ್ದಾರೆ. ಫೈಬರ್‌ ಮತ್ತು ಮಿನರಲ್‌ ಅಂಶ ಒಳಗೊಂಡಿರುವ ಈ ಬೆಳೆಯನ್ನು ಎಲ್ಲಾ ಪ್ರದೇಶದಲ್ಲಿ ಕಡಿಮೆ ನೀರಿನಲ್ಲಿ ಎಕರೆಗೆ 2 ರಿಂದ 3 ಕ್ವಿಂಟಲ್‌ ವರೆಗೂ ಬೆಳೆಯಬಹುದು. ಮಾರುಕಟ್ಟೆಯಲ್ಲಿ ಕೆ.ಜಿ ಗೆ ₹ 250 ರಿಂದ 300 ವರೆಗೂ ದರ ಇದೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಮಾನಧನ ಯೋಜನೆಗೆ ಎರಡು ಸಾವಿರಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕಾರಕ್ಕಾಗಿ ನಾಗರಿಕ ಸೇವಾ ಕೇಂದ್ರ ತೆರೆಯಲಾಗಿದ್ದು, 196 ಗ್ರಾಮ ಮಟ್ಟದ ಅನುವುಗಾರರನ್ನು ನೇಮಿಸಲಾಗಿದೆ. ವೃದ್ಧಾಪ್ಯದಲ್ಲಿ ಬಡ ರೈತರು ಯಾರ ಮೇಲೂ ಅವಲಂಬಿತರಾಗಬಾರದು ಎಂಬ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆ ಇದಾಗಿದೆ. ಗರಿಷ್ಠ 2 ಹೆಕ್ಟೇರ್ ಭೂ ಹಿಡುವಳಿ ಹೊಂದಿರುವ 18 ರಿಂದ 40 ವರ್ಷದೊಳಗಿನ ಅತಿ ಸಣ್ಣ ಪುರುಷ ಹಾಗೂ ಮಹಿಳಾ ರೈತರು. ವಯಸ್ಸಿನ ಆಧಾರದ ಮೇಲೆ ಮಾಸಿಕ ₹ 55 ರಿಂದ ₹ 250 ವರೆಗೆ ಪಾವತಿಸಬೇಕು. ಭಾರತೀಯ ಜೀವ ವಿಮಾ ನಿಗಮದ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ವ್ಯಕ್ತಿಗೆ 60 ವರ್ಷದ ಬಳಿಕ ಮೂರು ಸಾವಿರ ರೂಪಾಯಿ ಪಿಂಚಣಿ ದೊರೆಯಲಿದೆ. ವಾಸ ಸ್ಥಳ ದೃಢೀಕರಣ, ಬಿಪಿಎಲ್ ಪಡಿತರ ಚೀಟಿ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಭೂ ವಿವರ ಹಾಗೂ ಜನ್ಮ ದಿನಾಂಕ ಪ್ರತಿಯನ್ನು ಸಲ್ಲಿಸಬೇಕು. ರೈತರು ಪಾವತಿಸುವ ವಂತಿಕೆ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರ ಪಿಂಚಣಿ ನಿಧಿಗೆ ಪಾವತಿಸುತ್ತದೆ ಎಂದರು.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಜಂಟಿಯಾಗಿ ಜಿಲ್ಲೆಯ ರೈತರನ್ನು ಒಳಗೊಂಡಂತೆ ತಿಂಗಳಿಗೆ ಎರಡು ಸಭೆ ನಡೆಸಿ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗೆಯೇ ಕೃಷಿ ಅದಾಲತ್‌ ಸಹ ನಡೆಸಲಾಗುವುದು ಎಂದರು.

ಸಾವಯವ ಪದಾರ್ಥಗಳಿಗೆ ಮಾರುಕಟ್ಟೆ

ಶ್ರವಣಬೆಳಗೊಳ ಕ್ಷೇತ್ರದ ಬೆಕ್ಕ ಗ್ರಾಮದ ರಾಘವೇಂದ್ರ ಪ್ರಶ್ನೆಗೆ ಉತ್ತರಿಸಿದ ಮಧಸೂದನ್, ‘ಸಾವಯವ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಶ್ರವಣಬೆಳಗೊಳದ ಎರಡು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೆ ಇತರೆ ಪ್ರದೇಶಕ್ಕೂ ವಿಸ್ತರಿಸಲಾಗುವುದು. ಸಾವಯವ ಪದಾರ್ಥಗಳಿಗೆ ಮಾರುಕಟ್ಟೆ ಒದಗಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಹಾಸನ–ಕೊಡಗು ಪ್ರಾಂತೀಯ ಒಕ್ಕೂಟದಡಿ 34 ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಬೆಳೆವಿಮೆ ಪರಿಹಾರ ₹46 ಕೋಟಿ

ಆಲೂರು ತಾಲ್ಲೂಕಿನ ದೇವರಮನೆ ಕೊಪ್ಪಲಿನ ಚಂದ್ರಪ್ಪ ಪ್ರಶ್ನೆಗೆ ಉತ್ತರಿಸಿದ ಮಧುಸೂದನ್‌, ‘2018–19ನೇ ಸಾಲಿನಲ್ಲಿ ಮುಂಗಾರು ಬೆಳೆ ಹಾನಿಗೆ ₹46 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಬಹುತೇಕ ರೈತರ ಖಾತೆಗೆ ಹಣ ಜಮಾ ಆಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ಅಧಿಕ ಬೆಳೆ ನಷ್ಟವಾಗಿರುವುದರಿಂದ ಆ ಭಾಗಕ್ಕೆ ಹೆಚ್ಚು ಪರಿಹಾರ ದೊರೆತಿದೆ ಎಂದರು.

ಕಿಸಾನ್ ಸಮ್ಮಾನ್‌ ನಿಧಿ

ಹಾಸನ ತಾಲ್ಲೂಕಿನ ಬಿಟ್ಟಗೌಡನಹಳ್ಳಿಯ ಲೋಹಿತ್‌ ಪ್ರಶ್ನೆಗೆ ಉತ್ತರಿಸಿ ಮಧುಸೂದನ್‌, ‘ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ ಜಿಲ್ಲೆಯಲ್ಲಿ 2,55,745 ರೈತರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 2,37,458 ರೈತರಿಗೆ ಒಂದು, ಎರಡು, ಮೂರು ಕಂತುಗಳಲ್ಲಿ ಹಣ ಜಮಾ ಆಗಿದೆ. ಈಗಲೂ ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್‌ ಕಾರ್ಡ್‌, ಪಹಣಿ, ಇತರ ದಾಖಲೆ ಸಲ್ಲಿಸಿ ಹೆಸರು ನೋಂದಾಯಿಸಲು ಅವಕಾಶ ಇದೆ. ಮೂರು ಕಂತಿನಲ್ಲಿ ವರ್ಷಕ್ಕೆ ಕೇಂದ್ರ ಸರ್ಕಾರ ₹6 ಸಾವಿರ ಹಾಗೂ ರಾಜ್ಯ ಸರ್ಕಾರ ₹4 ಸಾವಿರ ನೀಡಲಿದೆ ಎಂದು ವಿವರಿಸಿದರು.

ರೈತರ ಪ್ರಶ್ನೆಗಳಿಗೆ ಉತ್ತರ

* ಮೋತಿಕುಮಾರ್‌, ಅಡಗೂರು, ಬೇಲೂರು ತಾಲ್ಲೂಕು

ಪ್ರಶ್ನೆ: ಎರಡು ಕಂತಿನಲ್ಲಿ ಹಣ ಪಾವತಿಸಿದ್ದರೂ ಮುಸುಕಿನ ಜೋಳಕ್ಕೆ ಬೆಳೆ ವಿಮೆ ಪರಿಹಾರ ಬಂದಿಲ್ಲ.

ಉತ್ತರ: ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಪರಿಹಾರ ಬರುವುದು ವಿಳಂಬ ಆಗಿರಬಹುದು. ವಿಮೆ ಹಣ ಕಟ್ಟಿರುವುದಕ್ಕೆ ಕೋಡ್‌ ನೀಡಲಾಗಿರುತ್ತದೆ. ಆ ಕೋಡ್‌ ನೀಡಿ ಸಹಾಯಕ ಕೃಷಿ ಅಧಿಕಾರಿ ಕಚೇರಿಯಲ್ಲಿ ವಿಚಾರಿಸಬೇಕು.

* ಮಲ್ಲೇಗೌಡ, ನೆರ್ಲಗಿ

ಪ್ರಶ್ನೆ: ಮಳೆ ಇಲ್ಲದೆ ಬೆಳೆಗಳು ನಾಶವಾಗಿವೆ. ರಾಗಿಗೆ ಬೆಂಬಲ ಬೆಲೆ ನೀಡುತ್ತೀರಾ?

ಉತ್ತರ: ಜಿಲ್ಲೆಯಲ್ಲಿ ಶೀಘ್ರದಲ್ಲೇ ರಾಗಿ ಖರೀದಿ ಕೇಂದ್ರ ತೆರೆಯಲಾಗುವುದು. ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹3,150 ಬೆಂಬಲ ಬೆಲೆ ನಿಗದಿ ಪಡಿಸಿದೆ. ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬಹುದು.

* ಶೇಖರ್‌, ಚನ್ನರಾಯಪಟ್ಟಣ

ಪ್ರಶ್ನೆ: ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ.‌

ಉತ್ತರ: ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಪ್ರಧಾನ ಮಂತ್ರಿ ಕಿಸಾನ್ ಮಾನ್‌ ಧನ್‌, ನೀರಾವರಿ ಯೋಜನೆಯಲ್ಲಿ ಶೇ 90ರವರೆಗೂ ಸಬ್ಸಿಡಿ ಇದೆ. ಸಹಾಯಕ ಕೃಷಿ ನಿರ್ದೇಶಕ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

* ಬಸವರಾಜು, ಕಾಮಸಮುದ್ರ, ಅರಸೀಕೆರೆ ತಾಲ್ಲೂಕು

ಪ್ರಶ್ನೆ: ₹1.75 ಲಕ್ಷ ಬೆಳೆ ಸಾಲಮನ್ನಾ ಆಗಿದೆ. ಆದರೂ ₹1.25 ಲಕ್ಷ ಬಡ್ಡಿ ಪಾವತಿಸುವಂತೆ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಉತ್ತರ: ಸಂಬಂಧಪಟ್ಟ ದಾಖಲೆಗಳೊಂದಿಗೆ ಕೆನರಾ ಬ್ಯಾಂಕ್‌ನ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ವಿಚಾರಿಸಿದರೆ ಸೂಕ್ತ ಮಾಹಿತಿ ದೊರೆಯಲಿದೆ.

* ದೊರೆಸ್ವಾಮಿ, ಕಟ್ಟೆ ಬೆಂಡೆಹಳ್ಳಿ, ಚನ್ನರಾಯಪಟ್ಟಣ

ಪ್ರಶ್ನೆ: ಕೃಷಿ ಉಪಕರಣ ವಿತರಣೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ.

ಉತ್ತರ: ಶೀಘ್ರದಲ್ಲೇ ಆನ್‌ಲೈನ್‌ ವ್ಯವಸ್ಥೆ ಮಾಡುವ ಮೂಲಕ ಇಲಾಖೆಯಲ್ಲಿ ಸುಧಾರಣೆ ತರಲು ಕ್ರಮ ವಹಿಸಲಾಗುತ್ತಿದೆ.

* ಜಯಪ್ರಕಾಶ್‌, ಹೊಳೆನರಸೀಪುರ

ಪ್ರಶ್ನೆ: ಬ್ಯಾಂಕ್‌ನಲ್ಲಿ ಆಭರಣ ಅಡವಿಟ್ಟುಕೊಂಡು ಕೃಷಿ ಸಾಲ ನೀಡುವುದನ್ನು ನಿಲ್ಲಿಸಲಾಗಿದೆ? ಕಾರಣ ಏನು?

ಉತ್ತರ: ಈ ಬಗ್ಗೆ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.‌

* ಮಂಜುನಾಥ್‌, ಕಾಮಸಮುದ್ರ, ಅರಸೀಕೆರೆ

ಪ್ರಶ್ನೆ: ಬೆಳೆ ವಿಮೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಉತ್ತರ: ಒಂದು ಪಂಚಾಯಿತಿಯಲ್ಲಿ 50 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಬೆಳೆಯನ್ನು ವಿಮಾ ಘಟಕಕ್ಕೆ ಪರಿಗಣಿಸಲಾಗುತ್ತದೆ. ಹಿಂದಿನ ಐದು ವರ್ಷಗಳ ಉತ್ತಮ ಇಳುವರಿಗಿಂತ ಪ್ರಸಕ್ತ ಇಳುವರಿ ಕಡಿಮೆ ಇದ್ದಲ್ಲಿ ವಿಮೆ ನೀಡಲಾಗುತ್ತದೆ.

* ಮಂಜು, ಹುಲಿಕಲ್‌, ಅರಕಲಗೂಡು ತಾಲ್ಲೂಕು

ಪ್ರಶ್ನೆ: ಜಮೀನಿನಲ್ಲಿ ಕಲ್ಲು, ಮಣ್ಣು ತುಂಬಿಕೊಂಡು ಯಾವ ಬೆಳೆ ಬೆಳೆಯಲು ಆಗುತ್ತಿಲ್ಲ? ಏನು ಮಾಡಬೇಕು ತಿಳಿಸಿ.

ಉತ್ತರ: ಏಪ್ರಿಲ್‌, ಮೇ ತಿಂಗಳಿನಲ್ಲಿ ಮಳೆ ಬಂದಾಗ ಹಸಿರೆಲೆ ಗೊಬ್ಬರ ಹಾಕಬೇಕು. ನಂತರ ರಾಗಿ ಬಿತ್ತನೆ ಮಾಡಬೇಕು. ದೊಡ್ಡ ಮಗ್ಗೆ ರೈತ ಸಂಪರ್ಕ ಕೇಂದ್ರದಲ್ಲಿ ಹಸಿರೆಲೆ ಗೊಬ್ಬರ ಬೀಜ ದೊರೆಯುತ್ತದೆ.

* ಅನಿಲ್‌, ಬೇಲೂರು

ಪ್ರಶ್ನೆ: ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ ಮತ್ತು ಸೌಜನ್ಯದಿಂದ ವರ್ತಿಸುವುದಿಲ್ಲ.

ಉತ್ತರ: ಸವಲತ್ತುಗಳ ಬಗ್ಗೆ ಕಚೇರಿ ಎದುರು ಫಲಕ ಅಳವಡಿಸಲಾಗುವುದು. ರೈತರಿಗೆ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.