ADVERTISEMENT

ಹಾಸನ: ಹೊಸದಾಗಿ 23 ಜನಕ್ಕೆ ಕೋವಿಡ್-19, ಜನಪ್ರತಿನಿಧಿಗಳ ಕುಟುಂಬಕ್ಕೂ ಸೋಂಕು

ಕೋವಿಡ್-19ನಿಂದ ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:41 IST
Last Updated 15 ಜುಲೈ 2020, 16:41 IST
ಡಾ.ಸತೀಶ್‌ ಕುಮಾರ್‌
ಡಾ.ಸತೀಶ್‌ ಕುಮಾರ್‌   

ಹಾಸನ: ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅವರ ಕುಟಂಬಕ್ಕೆ ಕೋವಿಡ್‌ 19 ದೃಢಪಟ್ಟಿದ್ದು, ಜನರು ಆತಂಕಗೊಂಡಿದ್ದಾರೆ.

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಮಂಡ್ಯದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಪುತ್ರಿ ಹಾಗೂ ಕಾರು ಚಾಲಕನಿಗೂ ಸೋಂಕು ತಗುಲಿದೆ.

ಚಂಚಲಾ ಅವರು ಪರೀಕ್ಷೆ ಬಳಿಕ ಅವರ ಪುತ್ರಿಯೊಂದಿಗೆ ಮಂಡ್ಯಕ್ಕೆ ತೆರಳಿದ್ದು. ಕೊರೊನಾ ಪಾಸಿಟಿವ್‌ ಬಂದಿರುವ ವಿಷಯ ತಿಳಿದು ಇಬ್ಬರೂ ಮಂಡ್ಯದ ಸ್ವಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಹಾಸನದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಅಲ್ಲದೇ ಬಿಜೆಪಿ ಹಿರಿಯ ಮುಖಂಡರಾದ ಸುಶೀಲಮ್ಮಶಿವಪ್ಪ ಹಾಗೂ ಬೇಲೂರು ತಾಲ್ಲೂಕು ನಾಗೇನಹಳ್ಳಿ ಕ್ಷೇತ್ರದ ಜಿಲ್ಲಾ
ಪಂಚಾಯಿತಿ ಸದಸ್ಯನಿಗೂ ಪಾಸಿಟಿವ್‌ ಬಂದಿದೆ.

‘ಪತ್ನಿ, ನಾನು, ಗನ್‌ ಮ್ಯಾನ್ ಹಾಗೂ ಚಾಲಕ ಪರೀಕ್ಷೆಗೆ ಒಳಗಾಗಿದ್ದೇವು. ಪತ್ನಿಗೆ ಸೋಂಕು ದೃಢಪಟ್ಟಿದ್ದು, ಉಳಿದವರ ವರದಿ ನಗೆಟಿವ್‌ ಬಂದಿದೆ. ಪತ್ನಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರು ಗುಣಮುಖರಾಗುತ್ತಾರೆ. ಕ್ಷೇತ್ರದ ಜನರು ಭಯ ಪಡುವುದು ಬೇಡ. ಒಂದು ವಾರ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡದಂತೆ ಮನವಿ ಮಾಡುತ್ತೇನೆ. ಫೋನ್‌ ಮೂಲಕವೇ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು’ಎಂದು ಶಿವಲಿಂಗೇಗೌಡ ಭರವಸೆ ನೀಡಿದರು.

‘ಪತ್ನಿ ಹಾಗೂ ಪುತ್ರಿಗೆ ಸೋಂಕು ತಗುಲಿರುವುದರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾನು ಹೋಂ ಕ್ವಾರಂಟೈನ್‌ನಲ್ಲಿ ಇದ್ದೇನೆ. ಜತೆಗೆ ಇದ್ದ ಐದು ಜನರಿಗೆ ನೆಗೆಟಿವ್‌ ಬಂದಿದ್ದು, ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ನಲ್ಲಿದ್ದಾರೆ’ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.

ಹಾಸನದಲ್ಲಿ ಬುಧವಾರ ಹೊಸದಾಗಿ 25 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 740ಕ್ಕೆ ಏರಿದೆ. ಗುಣಮುಖರಾದ 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಕಲಗೂಡಿನ 75 ವರ್ಷದ ವೃದ್ಧ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಮಧುಮೇಹ, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಜುಲೈ 8ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 11 ರಂದು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವರೆಗೆ ಸೋಂಕಿಗೆ 23 ಜನ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ತಿಳಿಸಿದರು.

ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ಹಾಸನ 20, ಅರಸೀಕೆರೆ 1, ಸಕಲೇಶಪುರ 3, ಬೇಲೂರು 1 ಸೇರಿದೆ. ಬೆಂಗಳೂರು, ಮೈಸೂರು, ಆಂದ್ರಪ್ರದೇಶ ಪ್ರಯಾಣ ಹಿನ್ನೆಲೆ ಹೊಂದಿರುವವರು, ಸೋಂಕಿತರ ಜತೆ ಸಂಪರ್ಕಿತರು, ಡಯಾಬಿಟಿಸ್‌ ರೋಗಿಗಳು, ಆರೋಗ್ಯ ಸಿಬ್ಬಂದಿ, ಶೀತ ಜ್ವರ ಮಾದರಿ ಅನಾರೋಗ್ಯ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿದೆ. ಇದುವರೆಗೆ 486 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 232. 16 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.