ADVERTISEMENT

ಹಾಸನ: ನಗರಸಭೆಗೆ 25 ಗ್ರಾಮ, 1 ಬಡಾವಣೆ ಸೇರ್ಪಡೆ

ರಾಜ್ಯ ಸಚಿವ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 2:27 IST
Last Updated 2 ಅಕ್ಟೋಬರ್ 2020, 2:27 IST
ಹಾಸನ ನಗರಸಭೆ ಕಚೇರಿ
ಹಾಸನ ನಗರಸಭೆ ಕಚೇರಿ   

ಹಾಸನ: ನಗರಕ್ಕೆ ಹೊಂದಿಕೊಂಡಂತಿರುವ 9 ಗ್ರಾಮ ಪಂಚಾಯಿತಿಗಳ 25 ಗ್ರಾಮಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವಿಜಯ ನಗರಬಡಾವಣೆಯನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪೌರಾಡಳಿತ ಸಚಿವ ನಾರಾಯಣ ಗೌಡ ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ವಿಷಯವನ್ನು ಸಂಪುಟದ ಮುಂದೆ ಇಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ. ಸಚಿವ ನಾರಾಯಣ ಗೌಡ ಅವರಲ್ಲಿ ಈ ಬಗ್ಗೆ ಶಾಸಕ ಪ್ರೀತಂ ಜೆ.ಗೌಡ ಕೂಡ ಮನವಿ ಮಾಡಿದ್ದರು. 1995 ರಲ್ಲಿ ಘೋಷಣೆಯಾದ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 1.56 ಲಕ್ಷ ಜನ ಸಂಖ್ಯೆ ಇದೆ. ಈಗ ಇನ್ನೂ 25 ಗ್ರಾಮಗಳು ಮತ್ತು ವಿಜಯನಗರ ಬಡಾವಣೆ ಸೇರ್ಪಡೆ ಮಾಡುವುದರಿಂದ 2.26 ಲಕ್ಷ ಜನ ಸಂಖ್ಯೆ ಆಗಲಿದೆ.

ಈ 26 ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಶೇ. 100ರಷ್ಟು ಕುಟುಂಬಗಳು ವ್ಯವಸಾಯೇತರ ಚಟುವಟಿಕೆಗಳಲ್ಲಿ ತೊಡಗಿದ್ದು, ಕೈಗಾರಿಕಾ ಪ್ರದೇಶಗಳು ಸಹ ಒಳಗೊಂಡಿವೆ. ನಗರೀಕರಣವಾಗಿ ಅಭಿವೃದ್ಧಿಗೊಂಡಿರುವ ಬಡಾವಣೆಗಳಾಗಿರುತ್ತವೆ. ಆದ್ದರಿಂದ ಈ 25 ಗ್ರಾಮಗಳನ್ನು ಮತ್ತು ವಿಜಯನಗರ ಬಡಾವಣೆಯನ್ನು ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ಕಲಂ 4(ಎ)ರ ಅನುಸಾರ ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ADVERTISEMENT

2020ರ ಜು.14ರಂದು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ವಿಜಯ ನಗರ ಬಡಾವಣೆಯನ್ನು ಒಳಗೊಂಡಂತೆ ನಗರಸಭೆ ವ್ಯಾಪ್ತಿಗೆ ಹೊಂದಿಕೊಂಡತಿರುವ ಕೆಲವು ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಕೋರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದರು. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದರು.

ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಆರ್‌.ಗಿರೀಶ್‌ ಅವರ ಅಧ್ಯಕ್ಷತೆಯಲ್ಲಿ 2020ರ ಜು. 27ರಂದು ನಗರಸಭೆಯ ಸಾಮಾನ್ಯ ಸಭೆಯ ನಡವಳಿ ವಿಷಯ ಸಂಖ್ಯೆ (6)ರ ಮೂಲಕ ನಿರ್ಣಯ ಕೈಗೊಂಡು ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ಕಲಂ 4(ಎ) ಅನುಸಾರ 25 ಗ್ರಾಮಗಳು ಹಾಗೂ ವಿಜಯನಗರ ಬಡಾವಣೆಯನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಅನುಮೋದನೆ ನೀಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.