ADVERTISEMENT

ಕೊಣನೂರು: ರುದ್ರಪಟ್ಟಣ ಸಂಗೀತೋತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 19 ಮೇ 2025, 19:36 IST
Last Updated 19 ಮೇ 2025, 19:36 IST
ರಾಮನಾಥಪುರ ಹೋಬಳಿಯ ರುದ್ರಪಟ್ಣದಲ್ಲಿರುವ ಸಪ್ತಸ್ವರ ದೇವತಾ ಮಂದಿರ.
ರಾಮನಾಥಪುರ ಹೋಬಳಿಯ ರುದ್ರಪಟ್ಣದಲ್ಲಿರುವ ಸಪ್ತಸ್ವರ ದೇವತಾ ಮಂದಿರ.   

ಕೊಣನೂರು (ಹಾಸನ ಜಿಲ್ಲೆ): ಸಂಗೀತ ಗ್ರಾಮವೆಂದೇ ಪ್ರಸಿದ್ಧಿ ಪಡೆದಿರುವ, ಸಮೀಪದ ರುದ್ರಪಟ್ಟಣದ ರಾಮಮಂದಿರದಲ್ಲಿ ‘ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್’ನ 22 ನೇ ವಾರ್ಷಿಕ ಸಂಗೀತೋತ್ಸವವು ಮೇ 21 ರಿಂದ 25 ರವರೆಗೆ 5 ದಿನಗಳ ಕಾಲ ಜರುಗಲಿದ್ದು, ಸಂಗೀತ ಪ್ರಿಯರಿಗೆ ರಸದೌತಣ ನೀಡಲಿದೆ.

ದೇಶ–ವಿದೇಶಗಳಲ್ಲಿ ತಮ್ಮ ‘ವಾಗ್ಗೇಯಕಾರ’ ಪ್ರತಿಭೆಯ ಮೂಲಕ ಪ್ರಖ್ಯಾತರಾದ ಡಾ.ಆರ್.ಕೆ.ಪದ್ಮನಾಭ ಅವರು ನೇತೃತ್ವ ವಹಿಸಲಿದ್ದು, ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತದ ಹತ್ತಾರು ಪ್ರತಿಭೆಗಳ ಹಾಡುಗಾರಿಕೆ ಹಾಗೂ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಖ್ಯಾತಿಯ ಪಕ್ಕವಾದ್ಯ ಕಲಾವಿದರ ಮೇಳ ಮೆರುಗು ನೀಡಲಿದೆ. ಕರ್ನಾಟಕವಷ್ಟೇ ಅಲ್ಲದೇ ವಿವಿಧ ರಾಜ್ಯಗಳ ನೂರಾರು ಶ್ರೋತೃಗಳು ವಾಸ್ತವ್ಯ ಹೂಡಲಿದ್ದಾರೆ.

ಕರ್ನಾಟಕ ಸಂಗೀತ ದೇವತೆಗಳೆನಿಸಿರುವ ಕನಕದಾಸರು, ವಾದಿರಾಜರು, ಪುರಂದರದಾಸರು, ದೇವಿ ಸರಸ್ವತಿ, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶಾಮಶಾಸ್ತ್ರೀಯವರ ಮೂರ್ತಿಗಳಿಗೆ ರುದ್ರಪಟ್ಟಣದಲ್ಲಿ ನಿತ್ಯ ಪೂಜೆ ನೆರವೇರಿಸಲಾಗುತ್ತಿದೆ. ವಿಶ್ವದ ಏಕೈಕ ತಂಬೂರಿಯಾಕಾರದ ಸಪ್ತಸ್ವರ ದೇವತಾ ಧ್ಯಾನ ಮಂದಿರ ಮತ್ತು ದ್ವಾದಶ ಸ್ವರ ಸ್ತಂಭ ಮಂಟಪಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ.

ADVERTISEMENT

‘ಅನುಭವಿ, ಪ್ರಸಿದ್ಧಿ ಪಡೆದ ಸಂಗೀತಗಾರರಿಗಷ್ಟೇ ಮೀಸಲಿದ್ದ ಉತ್ಸವದಲ್ಲಿ ಈಗ ಯುವ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಬಿರುದು ಪ್ರದಾನ ಮತ್ತು ಗೌರವ ಸಮರ್ಪಣೆಯೂ ನಡೆಯಲಿದೆ’ ಎನ್ನುತ್ತಾರೆ ಆರ್.ಕೆ. ಪದ್ಮನಾಭ್.

ಸಪ್ತಸ್ವರ ದೇವತಾ ಮಂದಿರದಲ್ಲಿರುವ ಸಂಗೀತ ದೇವತೆಗಳ ಮೂರ್ತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.