ADVERTISEMENT

ಮಲೆನಾಡಿನಲ್ಲಿ 5 ತಿಂಗಳ ನಿರಂತರ ಮಳೆ: ಹೆಚ್ಚಿದ ಶೀತ; ಒಣಗಿದ ಕಿತ್ತಳೆ ಮರಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:40 IST
Last Updated 21 ಅಕ್ಟೋಬರ್ 2025, 7:40 IST
ಸಕಲೇಶಪುರ ತಾಲ್ಲೂಕಿನ ತಂಬಲಗೆರೆ ಗ್ರಾಮದ ರೈತ ಟಿ.ಎಸ್‌. ತಮ್ಮೇಗೌಡ ಅವರ ತೋಟದಲ್ಲಿ ಕಿತ್ತಳೆ ಮರಗಳು ಒಣಗಿರುವುದು
ಸಕಲೇಶಪುರ ತಾಲ್ಲೂಕಿನ ತಂಬಲಗೆರೆ ಗ್ರಾಮದ ರೈತ ಟಿ.ಎಸ್‌. ತಮ್ಮೇಗೌಡ ಅವರ ತೋಟದಲ್ಲಿ ಕಿತ್ತಳೆ ಮರಗಳು ಒಣಗಿರುವುದು   

ಸಕಲೇಶಪುರ (ಹಾಸನ ಜಿಲ್ಲೆ): ಮಲೆನಾಡು ಭಾಗದಲ್ಲಿ ಐದು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದ, ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನಲ್ಲಿರುವ ತಂಬಲಗೆರೆ ಗ್ರಾಮದ ರೈತ ಟಿ.ಎಸ್‌. ತಮ್ಮೇಗೌಡ ಅವರ ತೋಟದ ಸುಮಾರು 300 ಕಿತ್ತಳೆ ಮರಗಳು ಸಂಪೂರ್ಣ ಒಣಗಿ ನಷ್ಟ ಉಂಟಾಗಿದೆ.

ಮೇ ಎರಡನೇ ವಾರದಿಂದ ಶುರುವಾದ ಮುಂಗಾರು ಅಕ್ಟೋಬರ್ ಮೊದಲ ವಾರದವರೆಗೂ ನಿರಂತರವಾಗಿ ಸುರಿದಿದೆ. ಈ ಅವಧಿಯಲ್ಲಿ ಕನಿಷ್ಠ ಒಂದು ವಾರ ಮಳೆ ಬಿಡುವು ನೀಡಿ ಬಿಸಿಲು ಬಿದ್ದಿದ್ದರೆ ಭೂಮಿಯಲ್ಲಿ ತೇವಾಂಶ ಆರುತ್ತಿತ್ತು. ಬಿಸಿಲು ಬೀಳದೆ ತೇವಾಂಶ ಹೆಚ್ಚಿ ಬೆಳೆ ನಾಶವಾಗಿದೆ.

‘16 ವರ್ಷದ ಕಾಫಿ ತೋಟಗಳ ನಡುವೆ 300 ಕೂರ್ಗ್ ತಳಿಯ ಕಿತ್ತಳೆ ಗಿಡಗಳನ್ನು ಬೆಳೆದಿದ್ದೆ. ವರ್ಷದಲ್ಲಿ ಜೂನ್‌ ಹಾಗೂ ಅಕ್ಟೋಬರ್ ತಿಂಗಳಲ್ಲಿ ಎರಡು ಫಸಲು ಬರುತ್ತಿತ್ತು. ಅದರಿಂದ ವಾರ್ಷಿಕ ಸರಾಸರಿ ₹2.50 ಲಕ್ಷ ಆದಾಯವಿತ್ತು. ಪಶ್ಚಿಮಘಟ್ಟದ ಅಂಚಿನಲ್ಲಿ ಗ್ರಾಮವಿರುವುದರಿಂದ ಗಾಳಿ ಹಾಗೂ ಮಳೆ ಹೆಚ್ಚು’ ಎಂದು ತಮ್ಮೇಗೌಡ ತಿಳಿಸಿದರು.

ADVERTISEMENT

‘ಕಾಫಿ ಬೆಳೆಯಿಂದಲೂ ಹೆಚ್ಚು ಫಸಲು ನಿರೀಕ್ಷಿಸಲಾಗದು. ಜೊತೆಗೆ ಕಾಡಾನೆಗಳು, ಕಾಟಿಗಳು, ಕಾಡು ಹಂದಿಗಳು ಸೇರಿ ವನ್ಯ ಜೀವಿಗಳಿಂದಲೂ ಬೆಳೆ ಹಾನಿಯಾಗುತ್ತಿದೆ. ಜೀವ ಭಯ ಹಾಗೂ ಬೆಳೆ ನಷ್ಟದ ನಡುವೆಯೂ ತೋಟಗಳಲ್ಲಿ ಮಿಶ್ರಬೆಳೆಗಳನ್ನು ಬೆಳೆದು, ಕಷ್ಟದ ಬದುಕು ನಡೆಸುತ್ತಿದ್ದೇವೆ. ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಕೋರಿದರು.‌

‘ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಳು ಮೆಣಸು, ಕಾಫಿ ಬೆಳೆ ಸಹ ಕೊಳೆ ರೋಗಕ್ಕೆ ತುತ್ತಾಗಿ ಶೇ 60ಕ್ಕಿಂತ ಹೆಚ್ಚು ಫಸಲು ನಾಶವಾಗಿದೆ’ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಗಮನಹರಿಸಲಿ: ಶಾಸಕ

‘ಸಕಲೇಶಪುರ–ಆಲೂರು–ಕಟ್ಟಾಯ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಶೀತ ಹೆಚ್ಚಾಗಿ ಫಸಲು ಶೇ 50ಕ್ಕಿಂತಲೂ ಹೆಚ್ಚು ಹಾನಿಗೊಳಗಾಗಿದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು’ ಎಂದು ಶಾಸಕ ಸಿಮೆಂಟ್‌ ಮಂಜು ಆಗ್ರಹಿಸಿದ್ದಾರೆ. ‘ಹಿಂದಿನ ಎರಡು ವರ್ಷವೂ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿತ್ತು. ಆದರೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡದೆ ಅನ್ಯಾಯವೆಸಗಿದೆ. ಈ ಬಗ್ಗೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.