ADVERTISEMENT

ಶ್ರಮಣರಿಂದ ಶ್ರವಣಬೆಳಗೊಳ ಪಾವನ

ಬಿ.ಪಿ.ಜಯಕುಮಾರ್‌
Published 7 ಜನವರಿ 2018, 9:27 IST
Last Updated 7 ಜನವರಿ 2018, 9:27 IST
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಭದ್ರಬಾಹು ಗುಹೆ
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಭದ್ರಬಾಹು ಗುಹೆ   

ಶ್ರವಣಬೆಳಗೊಳ: 2300 ವರ್ಷ ಇತಿಹಾಸವಿರುವ ದಿಗಂಬರ ಜೈನ ಪರಂಪರೆ ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟ ಪ್ರಖ್ಯಾತವಾಗಿದೆ. ಮಗಧ ದೊರೆ ಸಾಮ್ರಾಟ್‌ ಚಂದ್ರಗುಪ್ತ ಮೌರ್ಯ ಮತ್ತು ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳ ಸಲ್ಲೇಖನದಿಂದ ಸಮಾಧಿ ಮರಣ ಹೊಂದಿದ ಚಂದ್ರಗಿರಿಯ ಭದ್ರಬಾಹು ಗುಹೆ, ನಿಗ್ರಂಥ ಮುನಿಗಳ ಹಾಗೂ ಶ್ರಮಣ ಸಂಸ್ಕತಿಯ ಶ್ರಾವಕರನ್ನು ಸೆಳೆಯುವ ಸ್ಥಳವಾಗಿದೆ.

ಚಂದ್ರಗಿರಿ ಹತ್ತಿದಾಗ ಎಡಭಾಗದಲ್ಲಿ ಜಿನ ಬಸದಿ, ಬಲ ಬದಿ ಭದ್ರಬಾಹು ಗುಹೆ ಇದೆ. ಇದರೊಳಗೆ ಅಂತಿಮ ಶ್ರುತ ಕೇವಲಿ ಭದ್ರಬಾಹುಗಳ ಚರಣ ಚಿಹ್ನೆ ಕಾಣಬಹುದು. ಹೊರಗೆ ಪ್ರಭಾಚಂದ್ರ ಆಚಾರ್ಯರ ಪಾದ ಗುರುತು ಇದೆ. ಈ ಗುಹೆ ಶ್ರಮಣ ಪರಂಪರೆ ಹಾಗೂ ಚಂದ್ರಗಿರಿ ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಹಾವೀರನ 8 ನೇ ಉತ್ತರಾಧಿಕಾರಿಯಾದ ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿ, ಸಾಮ್ರಾಟ್‌ ಚಂದ್ರಗುಪ್ತನ ದುಸ್ವಪ್ನ ಕೇಳಿ ತನ್ನ ಜ್ಞಾನದಿಂದ ಉತ್ತರ ಭಾರತದಲ್ಲಿ 12 ವರ್ಷ ಬರಗಾಲ ಬಂದು ಮುನಿಗಳ ಆಚರಣೆಗೆ ಅಡಚಣೆಯಾಗುತ್ತದೆ ಅಂದುಕೊಂಡು ದಕ್ಷಿಣ ಭಾರತದ ಕಡೆಗೆ ವಿಹಾರ ಹೊರಡಲು ನಿರ್ಧರಿಸುತ್ತಾರೆ.

ADVERTISEMENT

ಆಗ ಅವರೊಂದಿಗೆ ಚಂದ್ರಗುಪ್ತನೂ ಹೊರಟು 12,000 ಮುನಿಗಳೊಂದಿಗೆ ವಿಹಾರ ಮಾಡುತ್ತಾ ಶ್ರವಣಬೆಳಗೊಳ ತಲುಪಿದ್ದರು. ಈ ವಿವರವನ್ನು ರತ್ನನಂದಿಯ ಭದ್ರಬಾಹು ಚರಿತೆ ಹಾಗೂ ಚಂದ್ರಗಿರಿ ಶಾಸನಗಳಿಂದ ತಿಳಿಯಬಹುದು. ಅಂದು ಈ ಪ್ರದೇಶ ದಟ್ಟವಾದ ಕಾನನಗಳಿಂದ ಕೂಡಿದ್ದು, ಸಮಾಧಿಗೆ ಯೋಗ್ಯವಾದ ಸ್ಥಳವಾಗಿತ್ತು. ನಂತರ ಇದನ್ನು ಕಟವಪ್ರಗಿರಿ ಎಂದು ಕರೆಯಲಾಯಿತು.

ಭದ್ರಬಾಹು ತಮ್ಮ ಶಿಷ್ಯ ಚಂದ್ರಗುಪ್ತನೊಂದಿಗೆ ದಕ್ಷಿಣ ಭಾರತದ ಕಡೆಗೆ ಹೊರಟು ಇಂದಿನ ಶ್ರವಣಬೆಳಗೊಳಕ್ಕೆ ಆಗಮಿಸಿ, ಇಲ್ಲಿಯೇ ಅಂತಿಮ ದಿನ ಕಳೆದು ಸಲ್ಲೇಖನ ವಿಧಿಯಿಂದ ಸಮಾಧಿ ಮರಣ ಹೊಂದಿದರು. ಚಂದ್ರಗುಪ್ತ ಸಹ ಜಿನ ದೀಕ್ಷೆ ಪಡೆದು ಪ್ರಭಾಚಂದ್ರ ಆಚಾರ್ಯನಾಗಿ ಇಲ್ಲಿಯೇ ಸಮಾಧಿ ಮರಣ ಹೊಂದಿದ. ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳು ತನ್ನ ಜೊತೆಯಲ್ಲಿ 12 ಸಾವಿರ ಶಿಷ್ಯರನ್ನು ಕರೆತಂದಿದ್ದರೆಂದು ಪ್ರತೀತಿ ಇದೆ.

ಇಲ್ಲಿ ಸಮಾಧಿ ಹೊಂದುವ ಮುನ್ನ ಶಿಷ್ಯರು ತನ್ನ ಮೇಲೆ ವ್ಯಾಮೋಹ ಹೊಂದಬಾರದು ಎಂಬ ದೃಷ್ಠಿಯಿಂದ ಶಿಷ್ಯರ ಪ್ರಮುಖನಾದ ವಿಶಾಖಾಚಾರ್ಯರ ನೇತೃತ್ವದಲ್ಲಿ 4,000 ಮುನಿಗಳನ್ನು ತಮಿಳುನಾಡಿನ ಕಡೆಗೆ ವಿಹಾರ ಹೋಗುವಂತೆ ಆದೇಶ ನೀಡಿದರು. ಉಳಿದ ಮುನಿಗಳು ಕರ್ನಾಟಕ, ಆಂಧ್ರಪ್ರದೇಶ ಹಾಗೂ ಇತರೆಡೆಗೆ ವಿಹಾರ ಕೈಗೊಂಡರು. ಈ ಕಾರಣದಿಂದ ಜೈನ ಧರ್ಮ ದಕ್ಷಿಣ ಭಾರತದಲ್ಲಿ ಹರಡಲು ಕಾರಣವಾಯಿತು.

ಭದ್ರಬಾಹುವಿನ ನಂತರ ಜೈನಾಚಾರ್ಯರು ಹಾಗೂ ಮುನಿಗಳು ಶ್ರವಣಬೆಳಗೊಳಕ್ಕೆ ಬಂದು ತಮ್ಮ ಅಂತಿಮ ದಿನ ಕಳೆದಿದ್ದರಿಂದ ಕಟವಪ್ರ ( ಸಮಾಧಿ ಯೋಗ್ಯ ಸ್ಥಳ ) ಎಂದು ಖ್ಯಾತವಾಗಿತ್ತು.

ಇಂದಿನ ಶ್ರವಣಬೆಳಗೊಳ ಮುನಿಗಳ ಸಲ್ಲೇಖನ ಕೇಂದ್ರವಾಗಿ, ಶ್ರಮಣರ ಕೇಂದ್ರವಾಯಿತು. ಅವರ ನಂತರ ಜಿನ ಮುನಿಗಳು ಇದೊಂದು ಪವಿತ್ರ ಕ್ಷೇತ್ರವೆಂದು ಭಾವಿಸಿ ಇಲ್ಲಿಗೆ ಭೇಟಿ ನೀಡಿ ಸಮಾಧಿ ಮರಣ ಹೊಂದಿದರು.

‘2300 ವರ್ಷಗಳಿಂದ ಈ ಪ್ರದೇಶ ಶ್ರಮಣರಿಂದ ಪಾವನ ವಾಗಿದ್ದು, ಅವರ ಸಮಾಧಿ ಮರಣ ಸೂಚಿಸುವ 106 ನಿಶಿಧಿ ಶಾಸನಗಳು ದೊರೆತಿವೆ. ಇವುಗಳಿಂದ ಶ್ರಮಣರ ಚಿತ್ರಣ ದೊರಕಿದೆ’ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಜೀವಂಧರ ಕುಮಾರ ಹೊತಪೇಟೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.