ADVERTISEMENT

₹8 ಕೋಟಿಗೂ ಅಧಿಕ ಹಣ ಹೂಡಿಕೆ

ಹೆಚ್ಚಿನ ಬಡ್ಡಿ ಆಸೆಗೆ ಹಣ ಹಾಕಿರುವ 60ಕ್ಕೂ ಹೆಚ್ಚು ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:34 IST
Last Updated 11 ಜೂನ್ 2019, 13:34 IST

ಹಾಸನ: ಚಿನ್ನಾಭರಣದ ಜತೆಗೆ ಹೆಚ್ಚಿನ ಬಡ್ಡಿ ಸಿಗುವ ಆಸೆಗೆ ಜಿಲ್ಲೆಯ 60ಕ್ಕೂ ಹೆಚ್ಚು ಗ್ರಾಹಕರು ₹ 8 ಕೋಟಿಗೂ ಅಧಿಕ ಹಣವನ್ನು ‘ಐಎಂಎ ಸಮೂಹ ಕಂಪೆನಿ’ಯಲ್ಲಿ ಹೂಡಿಕೆ ಮಾಡಿದ್ದಾರೆ.

ಹಾಸನ ನಗರ ಸೇರಿದಂತೆ ಬೇಲೂರು, ಹೊಳನರಸೀಪುರ ಭಾಗದ ಗುತ್ತಿಗೆದಾರರು, ಉದ್ಯಮಿಗಳು, ಮಧ್ಯಮ ವರ್ಗದವರು, ವಿಧವೆಯರು ಸಹ ಹೆಚ್ಚಿನ ಬಡ್ಡಿ ಆಸೆಗೆ ಲಕ್ಷಾಂತರ ರೂಪಾಯಿ ಹಣ ತೊಡಗಿಸಿದ್ದಾರೆ. ಒಬ್ಬೊಬ್ಬರು ₹ 1, 4, 15, 30 ಲಕ್ಷ, ಹೀಗೆ ತಮ್ಮ ಶಕ್ತಿ ಅನುಸಾರ ಹಣ ಹಾಕಿದ್ದಾರೆ.

ಎರಡು ವರ್ಷದ ಹಿಂದೆ ಐಎಂಎ ಕಂಪನಿ ನಗರದ ತಣ್ಣೀರು ಹಳ್ಳದ ಬಳಿ ಲಲಿತಾ ಮಂಜುನಾಥ್ ಕಲ್ಯಾಣ ಮಂಟಪದ ಎದುರು ₹ 5 ಕೋಟಿ ವೆಚ್ಚದಲ್ಲಿ 30 ಗುಂಟೆ ಜಾಗ ಖರೀದಿಸಿದೆ. ಈ ಜಾಗದಲ್ಲಿ ಕಂಪನಿಯ ಫಲಕ ಹಾಕಲಾಗಿದ್ದು, ಅಪಾರ್ಟ್‌ಮೆಂಟ್‌ ಕಟ್ಟಲು ಉದ್ದೇಶಿಸಿತ್ತು ಎನ್ನಲಾಗಿದೆ.

ADVERTISEMENT

‘ನಾಲ್ಕು ವರ್ಷದಿಂದ ಒಟ್ಟು ₹ 30 ಲಕ್ಷ ಹಣ ಹೂಡಿಕೆ ಮಾಡಿದ್ದೇನೆ. ಕಂಪನಿಯ ಪ್ರಧಾನ ಕಚೇರಿ ಬಾಗಿಲು ಮುಚ್ಚಿದೆ. ಸಾಲ ಮಾಡಿ ಠೇವಣಿ ಇರಿಸಿರುವ ಹಣಕ್ಕೆ ಎರಡು ತಿಂಗಳಿನಿಂದ ಡಿವಿಡೆಂಡ್‌ ಇಲ್ಲ, ಅಸಲೂ ಇಲ್ಲ. ಏನು ಮಾಡಬೇಕು ದಿಕ್ಕು ತೋಚುತ್ತಿಲ್ಲ. ಹಣ ಹೂಡಿಕೆ ಮಾಡಿರುವ ದಾಖಲೆಯೊಂದಿಗೆ ಬುಧವಾರ ಬೆಂಗಳೂರಿಗೆ ತೆರಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ’ ಎಂದು ಕೆಎಚ್‌ಬಿ ಕಾಲೊನಿ ಹೂಡಿಕೆದಾರ ಪರ್ವೆಜ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಕಂಪನಿ ಮೇಲೆ ನಂಬಿಕೆ ಇಟ್ಟು ವರ್ಷದ ಹಿಂದೆ ₹ 2 ಲಕ್ಷ ಹೂಡಿಕೆ ಮಾಡಿದ್ದೇನೆ. ಪ್ರತಿ ತಿಂಗಳು ಶೇಕಡಾ 3ರಷ್ಟು ಬಡ್ಡಿ ಬರುತ್ತಿತ್ತು. ಇದೇ ರೀತಿ ಹಾಸನದಲ್ಲಿ ಹಲವರು ಹಣ ತೊಡಗಿಸಿದ್ದಾರೆ. ಪ್ರಕರಣ ದಾಖಲಾಗಿರುವುದರಿಂದ ಹಣ ವಾಪಸ್‌ ಸಿಗುವ ಭರವಸೆ ಇದೆ’ ಎಂದು ಹೂಡಿಕೆದಾರ ಪ್ರಕಾಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ರೀತಿ ಹಣ ಹೂಡಿಕೆ ಮಾಡಿರುವ ಹಾಸನ ಹುಸೇನ್‌, ಅಬುಬಕ್ಕರ್‌, ಫಯಾಜ್‌ ಅಹಮದ್‌ ಸಹ ಕಂಪನಿ ವಿರುದ್ಧ ಕರಣ ದಾಖಲಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.