
ಹಾಸನ: ದುಡಿಯುವ ಜನರು ಹೋರಾಟಕ್ಕೆ ಇಳಿದರೆ ಬೇರೆ ಬೇರೆ ರೀತಿಯ ಷಡ್ಯಂತ್ರದ ಮೂಲಕ ಅವರ ಹೋರಾಟದ ಒಡೆಯಲು ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ. ಹೇಮಲತಾ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಆರಂಭವಾದ ಸಿಐಟಿಯು 16 ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಕಾನೂನಿನ ಉಲ್ಲಂಘನೆಯು ಕ್ರಿಮಿನಲ್ ಅಪರಾಧ ಅಲ್ಲ ಎನ್ನುವ ನೀತಿ ಜಾರಿಯಾಗಿದೆ. ಬದಲಾಗಿ ಅದನ್ನು ಕೇವಲ ದಂಡಕ್ಕೆ ಸೀಮಿತಗೊಳಿಸಲಾಗಿದೆ. ಇದಕ್ಕೆ ಬದಲಾಗಿ ಕಾರ್ಮಿಕರು ಹೋರಾಟಕ್ಕೆ ಕರೆ ನೀಡಿದರೆ, ಅವರನ್ನು ಗೃಹ ಬಂಧನಕ್ಕೆ ಒಳಪಡಿಸುವ ಮೂಲಕ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
‘ಸಿಐಟಿಯು 17ನೇ ರಾಷ್ಟ್ರೀಯ ಸಮ್ಮೇಳನ ಕಾರ್ಮಿಕರ ಮೇಲಿನ ಈ ದಾಳಿಗಳನ್ನು ಗುರುತಿಸಿ ಹೋರಾಟಕ್ಕೆ ಕರೆ ನೀಡಿತ್ತು. ಜಗತ್ತಿನ ಕೋಟಿ ಕೋಟಿ ದುಡಿಯುವ ವರ್ಗ ಸಮಸ್ಯೆಗೆ ಸಿಲುಕಿದೆ. ಕೂಲಿ ಅಭದ್ರತೆ, ಕೆಲಸದ ಅಭದ್ರತೆ, ಸಾಮಾಜಿಕ ಅಭದ್ರತೆ ಕಾರ್ಮಿಕರನ್ನು ಆತಂಕದಲ್ಲಿ ಇರುವಂತೆ ಮಾಡಿದೆ. ಇದಕ್ಕೆ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಕಾರಣವಾಗಿದ್ದು ಈ ಬಿಕ್ಕಟ್ಟಿನ ಹೊರೆಯನ್ನು ಕಾರ್ಮಿಕರ ಮೇಲೆ ವರ್ಗಾವಣೆ ಮಾಡಿ ಶೋಷಣೆ ಮಾಡಲಾಗುತ್ತಿದೆ. ಈ ಶೋಷಣೆ ವಿರೋಧಿಸಿ ಜಗತ್ತಿನ ದುಡಿಯುವ ವರ್ಗದ ಹೋರಾಟ ಕೂಡ ಹೆಚ್ಚಾಗಿದೆ. ಎಲ್ಲ ವರ್ಗದ ಜನರೂ ಹೋರಾಟಕ್ಕೆ ಇಳಿಯುತ್ತಿದ್ದಾರೆ’ ಎಂದರು.
ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಎಸ್.ವರಲಕ್ಷ್ಮಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್ ಉಮೇಶ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಘಟಕದ ಉಪಾಧ್ಯಕ್ಷ ಬಿ ಜೆ ಕೆ ನಾಯರ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ನವೀನ್ ಕುಮಾರ್, ಪೃಥ್ವಿ, ಪುಷ್ಪ, ಅರವಿಂದ್ ಹಾಗೂ ಇತರರು ಭಾಗವಹಿಸಿದ್ದರು.
- ಹಕ್ಕುಗಳ ರಕ್ಷಣೆಯ ಚರ್ಚೆ ಅಗತ್ಯ
ಶೋಷಣೆ ಮತ್ತು ದೌರ್ಜನ್ಯಗಳಿಗೆ ತುತ್ತಾಗಿರುವ ಕಾರ್ಮಿಕರು ರೈತರು ದಲಿತರು ಮಹಿಳೆಯರು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಹಾಗೂ ರಾಜ್ಯದ ಆರ್ಥಿಕ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಈ ಸಮ್ಮೇಳನದಲ್ಲಿ ಚರ್ಚಿಸಬೇಕಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಎಚ್.ಎನ್. ಪರಮಶಿವಯ್ಯ ಹೇಳಿದರು. ನಮ್ಮ ಜಿಲ್ಲೆಯ ಯುವ ರಾಜಕಾರಣಿಯೊಬ್ಬನ ದುಷ್ಟತನದಿಂದಾಗಿ ನೊಂದ ನೂರಾರು ಹೆಣ್ಣು ಮಕ್ಕಳ ಪರವಾಗಿ ಸಿಐಟಿಯು ಹೋರಾಟದ ನೇತೃತ್ವ ವಹಿಸಿದ್ದು ಇಡೀ ರಾಜ್ಯದ ಮೆಚ್ಚುಗೆ ಪಡೆದಿದೆ. ಹಾಸನ ಜಿಲ್ಲೆಯಲ್ಲಿ ದಶಕಗಳಿಂದಲೂ ಆಯಾ ಕಾಲದಲ್ಲಿ ನಡೆದ ದೌರ್ಜನ್ಯ- ಅನ್ಯಾಯಗಳ ವಿರುದ್ಧ ನಿರಂತರ ಶೋಷಿತರ ಪರವಾಗಿ ಹಾಗೂ ಜಿಲ್ಲೆಯ ಸಾಮಾಜಿಕ ಮತ್ತು ಅಭಿವೃದ್ಧಿಯ ಪ್ರಶ್ನೆಗಳಿಗಾಗಿ ನಿರಂತರವಾದ ಹೋರಾಟ ನಡೆಸಿದೆ ಎಂದು ಹೇಳಿದರು. ದೇಶದಾದ್ಯಂತ ದುಡಿಯುವ ಜನರಾದ ಕಾರ್ಮಿಕರು ಕೂಲಿಕಾರರು ರೈತರು ದಲಿತರ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಿಐಟಿಯು 16ನೇ ರಾಜ್ಯ ಸಮ್ಮೇಳನ ಹಾಸನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.