ಹೆತ್ತೂರು: ಯಸಳೂರು ಹೋಬಳಿಯ ಬಾಳೆಕರೆ ಅರಣ್ಯದ ದಬ್ಬಳ್ಳಿಕಟ್ಟೆ ಬಳಿ ಮದಗಜದೊಂದಿಗೆ ಹೋರಾಟದ ವೇಳೆ ದಸರಾ ಅಂಬಾರಿ ಆನೆ ಅರ್ಜುನ ಮೃತಪಟ್ಟು ಡಿ.4ಕ್ಕೆ ಒಂದು ವರ್ಷ ಕಳೆದಿದೆ. ಆದರೆ, ಅರ್ಜುನನ ಹೋರಾಟ, ದಸರಾ ಸೇವೆಗೆ ಪ್ರತಿಯಾಗಿ ಇನ್ನೂ ಸೂಕ್ತ ಗೌರವ ಸಿಗುತ್ತಿಲ್ಲ ಎನ್ನುವ ಬೇಸರ ಇಲ್ಲಿನ ಜನರದ್ದಾಗಿದೆ.
2023ರ ಡಿ.4ರಂದು ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಅರ್ಜುನ ಆನೆ ಮೃತಪಟ್ಟಿತ್ತು. ಗ್ರಾಮಸ್ಥರು, ವನ್ಯಜೀವಿ ಪ್ರಿಯರ ಆಕ್ರೋಶದ ಮಧ್ಯೆ ಅದೇ ಪ್ರದೇಶದಲ್ಲಿ ಅರ್ಜುನನ ಸಮಾಧಿ ಮಾಡಲಾಗಿತ್ತು. ಅಂದಿನಿಂದಲೇ ದಬ್ಬಳ್ಳಿಕಟ್ಟೆ ಹಾಗೂ ಬಳ್ಳೆ ಆನೆ ಶಿಬಿರದಲ್ಲಿ ಅರ್ಜುನನ ಸ್ಮಾರಕ ನಿರ್ಮಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು.
ಅದರಂತೆ ಅರ್ಜುನನ ಸಾಹಸ ಗಾಥೆ ತಿಳಿಸುವ ಉದ್ದೇಶದೊಂದಿಗೆ ₹50 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ದಬ್ಬಳ್ಳಿಕಟ್ಟೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಜುಲೈ 6ರಂದು ಚಾಲನೆ ನೀಡಿದ್ದರು. ‘6 ತಿಂಗಳಲ್ಲಿ ಸ್ಮಾರಕ ನಿರ್ಮಾಣಗೊಳ್ಳಲಿದ್ದು, ಮೊದಲ ವರ್ಷದ ಪುಣ್ಯಸ್ಮರಣೆಯೊಳಗೆ ಪೂರ್ಣಗೊಳಿಸಲಾಗುವುದು’ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ, ಆನೆ ಅರ್ಜುನ ವೀರಮರಣ ಹೊಂದಿ ವರ್ಷ ಕಳೆದರೂ ಸ್ಮಾರಕ ಮಾತ್ರ ಇನ್ನೂ ಪೂರ್ಣಗೊಳ್ಳದಿರುವುದು ಅರ್ಜುನನ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
‘ಕಾಮಗಾರಿಗೆ ಚಾಲನೆ ನೀಡಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಅಂದುಕೊಂಡಂತೆ ಕಾಮಗಾರಿ ನಡೆಸಿದ್ದರೆ ಡಿ.4ರಂದು ಅರ್ಜುನ ಆನೆಯ ಪ್ರತಿಮೆ ಪ್ರತಿಷ್ಠಾಪನೆ ಆಗಬೇಕಿತ್ತು. ಆದರೆ, ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅನೇಕ ಕಾರಣ, ಸಬೂಬು ಹೇಳುತ್ತಾರೆ’ ಎನ್ನುವುದು ಸ್ಥಳೀಯರ ಆರೋಪ.
‘ಅರ್ಜುನ ಆನೆ 10 ಅಡಿ ಇತ್ತು. ಹೀಗಾಗಿ ಒಂದು ಅಡಿ ಹೆಚ್ಚಿಸಿ 11 ಅಡಿ ಪ್ರತಿಮೆ ಮಾಡಲು ಉದ್ದೇಶಿಸಲಾಗಿದೆ. ನಾಗರಹೊಳೆಯಲ್ಲಿ ಶಿಗ್ಗಾವಿ ಮೂಲದ ಪ್ರತಿಮೆ ತಯಾರಕರು ಅರ್ಜುನನ ಪ್ರತಿಮೆ ಸಿದ್ಧಪಡಿಸಿದ್ದಾರೆ. ಅದನ್ನು ಶೀಘ್ರದಲ್ಲೇ ದಬ್ಬಳ್ಳಿಕಟ್ಟೆಗೆ ಸ್ಥಳಾಂತರಿಸುವ ಕೆಲಸವಷ್ಟೇ ಬಾಕಿ ಇದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಈ ಪ್ರತಿಮೆ ಸುತ್ತಲಿನ ಪ್ರದೇಶವನ್ನು ಸುಂದರ ತಾಣವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಅರ್ಜುನನ ಸಾಹಸಗಾಥೆ, ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಸಾಗಿದ ಹಾದಿ, ಮಾವುತನೊಂದಿಗೆ ಹೊಂದಿದ್ದ ಆತ್ಮೀಯತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಪ್ರವಾಸಿಗರು ಕ್ಷಣಕಾಲದಲ್ಲಿ ಅರ್ಜುನನ ಇತಿಹಾಸ ತಿಳಿಯುವುದರ ಜೊತೆಗೆ ಅರಣ್ಯ, ವನ್ಯಜೀವಿಗಳ ರಕ್ಷಣೆಗೆ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.
1960ರಲ್ಲಿ ಜನಿಸಿದ ಅರ್ಜುನನನ್ನು 1968ರಲ್ಲಿ ಪಶ್ಚಿಮ ಘಟ್ಟಗಳ ಕಾಕನಕೋಟೆ ಕಾಡಲ್ಲಿ ಸೆರೆ ಹಿಡಿಯಲಾಗಿತ್ತು. ಪಳಗಿದ ನಂತರ 1990ರಲ್ಲಿ ದಸರಾ ಮೆರವಣಿಗೆ ಹಾಗೂ ಶಿಬಿರಗಳಲ್ಲಿ ನಿಯಮಿತವಾಗಿ ಬಳಸಿಕೊಳ್ಳಲಾಯಿತು. ನಂತರ ಅಂಬಾರಿ ಹೊರುವ ಪ್ರಮುಖ ಆನೆಗಳಲ್ಲಿ ಅರ್ಜುನ ಒಬ್ಬನಾಗಿದ್ದ. ಅರ್ಜುನನ ಗಾಂಭೀರ್ಯ ನಡಿಗೆ ದಸರಾ ಮೆರವಣಿಗೆಯ ಆಕರ್ಷಣೆಗೆ ಪ್ರಮುಖ ಕಾರಣವಾಗಿ ಜನಪ್ರಿಯತೆ ಪಡೆದಿತ್ತು.
ಒಂದು ವರ್ಷವಾದರೂ ಅರಣ್ಯ ಇಲಾಖೆ ಸಬೂಬು ಹೇಳಿ ಸ್ಮಾರಕ ನಿರ್ಮಾಣ ವಿಳಂಬ ಮಾಡುತ್ತಿದೆ. ಸ್ಮಾರಕ ಮಾಡಿ ಅರ್ಜುನನ ನೆನಪು ಜನರಲ್ಲಿ ಉಳಿಯುವಂತೆ ಮಾಡಬೇಕು.ಕೆ.ಬಿ.ಗಂಗಾಧರ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.