
ಆಲೂರು: ತಾಲ್ಲೂಕಿನಲ್ಲಿ ರೈಲ್ವೆ ಕ್ರಾಸಿಂಗ್ ಮೇಲೆ ಹಾದು ಹೋಗುವ ಗ್ರಾಮಗಳಿಗೆ ರೈಲ್ವೆ ಅಂಡರ್‌ಪಾಸ್ ಅಥವಾ ಫ್ಲೈಓವರ್ ರಸ್ತೆ ನಿರ್ಮಾಣ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಯಡೂರು ಗ್ರಾಮದ ಬಳಿ ರೈಲ್ವೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕ್ಷೇತ್ರದಲ್ಲಿ ರೈಲ್ವೆ ಕ್ರಾಸಿಂಗ್ ಮೂಲಕ ಅಂಬೇಡ್ಕರ್ ನಗರ, ಹಳೆ ಆಲೂರು, ಮಡಬಲು ಸೇರಿದಂತೆ ಹಲವು ಗ್ರಾಮಗಳಿಗೆ ನಿತ್ಯ ಜನಸಾಮಾನ್ಯರು ಓಡಾಡುತ್ತಾರೆ. ಗ್ರಾಮಗಳಲ್ಲಿ ಆಕಸ್ಮಿಕ ಅವಗಡಗಳು ಎದುರಾದ ಸಂದರ್ಭದಲ್ಲಿ, ರೈಲ್ವೆ ಗೇಟ್ ಬಂದ್ ಮಾಡಿದ ಸಂದರ್ಭದಲ್ಲಿ ತುರ್ತು ಸೇವೆಗೆ ಆಂಬುಲೆನ್ಸ್ ಇನ್ನಿತರೆ ವಾಹನಗಳು ಓಡಾಡಲು ಸಾಧ್ಯವಾಗುವುದಿಲ್ಲ. ರೈಲುಗಳು ಚಲಿಸುವ ಸಂದರ್ಭದಲ್ಲಿ ಸಾರ್ವಜನಿಕರು ಓಡಾಡಲು ಸಹ ತೊಂದರೆಯಾಗಿದೆ. ಕೂಡಲೆ ರೈಲ್ವೆ ಹಳಿಗಳ ಮೇಲೆ ಅಥವಾ ಕೆಳಗೆ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರ ನಿರ್ದೇಶನದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಗ್ರಾಮಗಳಿಗೆ ಹಾದು ಹೋಗುವ ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಅಥವಾ ಕೆಳಗಡೆ ಓಡಾಡಲು ರಸ್ತೆ ನಿರ್ಮಾಣ ಮಾಡಿ ಜನಸಾಮಾನ್ಯರ, ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲು ಸಚಿವರಿಗೆ ಮನವಿ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.