ADVERTISEMENT

ಮನೆ ಪಕ್ಕದ ನಿವೇಶನದ ಮಾಲೀಕತ್ವ ವಿವಾದ: ಪುಷ್ಪಾ–ದೇವರಾಜು ಮಧ್ಯೆ ಮತ್ತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:42 IST
Last Updated 2 ಫೆಬ್ರುವರಿ 2026, 4:42 IST
ಹಾಸನದ ವಿದ್ಯಾನಗರದಲ್ಲಿ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ದೇವರಾಜು ಮಧ್ಯೆ ಭಾನುವಾರ ವಾಗ್ವಾದ ನಡೆಯಿತು
ಹಾಸನದ ವಿದ್ಯಾನಗರದಲ್ಲಿ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ದೇವರಾಜು ಮಧ್ಯೆ ಭಾನುವಾರ ವಾಗ್ವಾದ ನಡೆಯಿತು   

ಹಾಸನ: ನಟ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಪಕ್ಕದಲ್ಲಿರುವ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಭಾನುವಾರ ಬೆಳಿಗ್ಗೆ ಮತ್ತೆ ಉದ್ಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಇಲ್ಲಿನ ವಿದ್ಯಾನಗರದ ವಿವಾದಿತ ನಿವೇಶನದಲ್ಲಿ ಭಾನುವಾರ ಬೆಳಿಗ್ಗೆಯಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆ ಪುಷ್ಪಾ ಅವರು ಸ್ಥಳದಲ್ಲೇ ಇದ್ದು, ಕೆಲಸ ನಡೆಯಬೇಕು ಎಂದು ಪಟ್ಟು ಹಿಡಿದರು. ಈ ಮಾಹಿತಿ ತಿಳಿಯುತ್ತಿದ್ದಂತೆ ನಿವೇಶನದ ಜಿಪಿಎ ಹೋಲ್ಡರ್ ದೇವರಾಜು ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುಷ್ಪಾ ಮತ್ತು ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿನ ಚಕಮಕಿ ತೀವ್ರಗೊಳ್ಳುತ್ತ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ‘ಕೆಲಸ ಮಾಡಿಯೇ ನಾನಿಲ್ಲಿ ಇರುತ್ತೇನೆ’ ಎಂದು ಪುಷ್ಪಾ ಪಟ್ಟು ಹಿಡಿದರೆ, ‘ಕಾಮಗಾರಿ ಕಾನೂನುಬಾಹಿರ’ ಎಂದು ದೇವರಾಜು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು ಮಧ್ಯಪ್ರವೇಶಿಸಿ, ಎರಡೂ ಪಕ್ಷದವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಗಮನಿಸಿದ ಪೊಲೀಸರು, ತಾತ್ಕಾಲಿಕವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು. ಇದರಿಂದಾಗಿ ಕೆಲಸಗಾರರು ಸ್ಥಳದಲ್ಲಿದ್ದ ಕಾಂಪೌಂಡ್ ನಿರ್ಮಾಣದ ಸಾಮಗ್ರಿಗಳನ್ನು ಮನೆಯ ಒಳಗೆ ಸಾಗಿಸಿದರು.

ಶನಿವಾರವೂ ಪುಷ್ಪಾ ಹಾಗೂ ದೇವರಾಜು ಮಧ್ಯೆ ವಾಗ್ವಾದ ನಡೆದಿತ್ತು. ಸ್ಥಳೀಯರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.