ಶ್ರವಣಬೆಳಗೊಳ: ಮಕ್ಕಳು ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೇ ದೇಸಿ ಆಹಾರ ಪದ್ಧತಿಯನ್ನು ಮರೆಯುತ್ತಾ ಹೆಚ್ಚಿನ ಜಂಕ್ ಫುಡ್ ಸೇವಿಸುತ್ತಿರುವುದರಿಂದ ಹೃದಯ ಸಂಬಂದಿ ಕಾಯಿಲೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ನವ ದೆಹಲಿಯ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ತಜ್ಞ ಡಾ. ವೆಂಕಟಾಚಲಪತಿ ಹೇಳಿದರು.
ಗೊಮ್ಮಟ ನಗರದ ಗೈಡ್ಲೈನ್ ಅಂತರರಾಷ್ಟ್ರೀಯ ಶಾಲೆಯ 26ನೇ ವಾರ್ಷಿಕೋತ್ಸವ ‘ವೈಭವ’ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಭಯ ಪಡುವುದರಿಂದ ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ. ಹಾಗಾಗದಂತೆ ತಡೆಯಲು ಅಂದಿನ ಪಾಠಗಳನ್ನು ಅಂದೇ ಓದುವುದರಿಂದ ಮನಸು ಹಗುರವಾಗುತ್ತದೆ.
ಮಕ್ಕಳಿಗೆ ಶಿಕ್ಷಕರು ಪೋಷಕರು ಅಂಕಗಳ ಬಗ್ಗೆ ಒತ್ತಡ ಹಾಕಬಾರದು, ಹಾಗೆಯೇ ಮತ್ತೊಬ್ಬ ಜಾಣ ವಿದ್ಯಾರ್ಥಿಯೊಂದಿಗೆ ಹೋಲಿಕೆಯನ್ನೂ ಮಾಡಬಾರದು. ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ಗಾಳಿ ಸುದ್ದಿ ಹರಡುತ್ತಾರೆ. ಅಂತಹ ಸುದ್ದಿಗಳ ಗಮನ ಕೊಡದೇ ಶಾಂತ ಚಿತ್ತದಿಂದ ಇರಬೇಕು ಎಂದರು.
ಗೈಡ್ ಲೈನ್ ಸಂಸ್ಥೆಯ ಅಧ್ಯಕ್ಷ ಕಬ್ಬಾಳು ರಮೇಶ್ ಮಾತನಾಡಿದರು. ತಾಲ್ಲೂಕು, ಜಿಲ್ಲೆ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನೇಕ ನೃತ್ಯಗಳನ್ನು ಮಾಡಿ ರಂಜಿಸಿದರು.
ನಿರ್ದೇಶಕರಾದ ಡಿ.ಕೆ.ಕೆಂಗಯ್ಯ, ಡಿ.ಕೆ.ರಾಮಸ್ವಾಮಿ, ಡಿ.ಕೆ.ನಾಗರಾಜು, ಡಿ.ಕೆ.ಲಕ್ಷ್ಮೀಪತಯ್ಯ, ಪ್ರಸೂತಿ ತಜ್ಞೆ ಡಾ ಅನಿತಾ, ಕಾರ್ಯದರ್ಶಿ ಕೆ.ಎನ್.ಮಮತಾ ರಮೇಶ್, ಪ್ರಾಂಶುಪಾಲ ಭರತ್ ಸಿ.ಕೆ, ಸಂಯೋಜಕ ಸಂಪತ್ ಕುಮಾರ್, ಕಬ್ಬಾಳು ಯತೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.