ADVERTISEMENT

ಆಲೂ ಬೆಳೆ ಉಳಿಸಲು ಜನಾಂದೋಲನ: ಬೆಳೆಗಾರರ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 20 ಮೇ 2019, 14:47 IST
Last Updated 20 ಮೇ 2019, 14:47 IST
ಹಾಸನದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ ಕುಮಾರ್‌ ಮಾತನಾಡಿದರು.
ಹಾಸನದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ ಕುಮಾರ್‌ ಮಾತನಾಡಿದರು.   

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಉಳಿಸಲು ಜನಾಂದೋಲನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಹಾಸನದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಕರ್ನಾಟಕ ಪ್ರಾಂತ ರೈತಸಂಘ, ಆಲೂಗಡ್ಡೆ ಬೆಳೆಗಾರರ ಹೋರಾಟ ಸಮಿತಿ ಆಯೋಜಿಸಿದ್ದ ಆಲೂಗಡ್ಡೆ ಬೆಳೆಗಾರರ ದುಂಡುಮೇಜಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಹಾಸನ ತಾಲ್ಲೂಕಿನಲ್ಲಿ ಬೆಳೆಯುವ ಆಲೂಗಡ್ಡೆ ಚಿಪ್ಸ್‌ ಮಾಡಲು ಹೆಸರುವಾಸಿಯಾಗಿದೆ. ಮೂರು ದಶಕದಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರು ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಹತ್ತು ವರ್ಷದಲ್ಲಿ 31,866 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 16 ಸಾವಿರ ರೈತ ಕುಟುಂಬಗಳು ಆಲೂಗಡ್ಡೆ ಬೆಳೆ ಬೆಳೆಯುವುದನ್ನು ನಿಲ್ಲಿಸಿವೆ. ಇದಕ್ಕೆ ಅಂಗಮಾರಿ ರೋಗ. ಅತಿವೃಷ್ಟಿ, ಅನಾವೃಷ್ಟಿ ಕಾರಣ ಎಂದು ಸಭೆ ಅಭಿಪ್ರಾಯಪಟ್ಟಿತು.

ರೈತರ ರಕ್ಷಣೆಗೆ ಧಾವಿಸಿ, ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಈವರೆಗೂ ಘೋಷಿಸಿಲ್ಲ. ಆದ್ದರಿಂದ ಜಿಲ್ಲಾ ಉಸ್ತವಾರಿ ಸಚಿವ, ಅಧಿಕಾರಿಗಳು, ಆಲೂಗಡ್ಡೆ ಬೆಳೆ ತಜ್ಞರು, ರೈತರು, ರೈತ ಮುಖಂಡರನ್ನೊಳಗೊಂಡ ಸಭೆ ಕರೆಯುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಯಿತು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ನವೀನ್‌ ಕುಮಾರ್, 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಕುಸಿತವಾಗಿರುವುದು ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ರೈತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಗಮನಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ಕೃಷಿ ಉಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಧರ್ಮೇಶ್, ಮಾದಿಗ ದಂಡೋರ ಸಮಿತಿಯ ವಿಜಯ್‍ಕುಮಾರ್, ಮಹಾಂತಪ್ಪ, ರೈತ ಮುಖಂಡರಾದ ಕೊಟ್ಟೂರು ಶ್ರೀನಿವಾಸ್, ದೇವರಾಜು, ಪ್ರಕಾಶ್, ಗಿಡ್ಡೇಗೌಡ, ಲಕ್ಷ್ಮಣಗೌಡ, ಪರಮೇಶ್, ಮಂಜು, ನಂಜೇಗೌಡ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ಪ್ರಕಾಶಕ ಚಲಂ ಹಾಡ್ಲಹಳ್ಳಿ ಹಾಜರಿದ್ದರು. ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.