
ಆಲೂರು: ಸಾಲು ಮರದ ತಿಮ್ಮಕ್ಕ ಅವಿದ್ಯಾವಂತರಾಗಿದ್ದರೂ ಪರಿಸರ, ಪ್ರಕೃತಿಯ ಮಹಿಮೆ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮನದಟ್ಟು ಮಾಡುವಲ್ಲಿ ಯಶಸ್ವಿ ಕಂಡರು ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಎಂ. ಸ್ನೇಹಾ ತಿಳಿಸಿದರು.
ಆಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಜೆ.ಎಂ.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ, ತಾಲ್ಲೂಕು ವಕೀಲರ ಸಂಘದ ವತಿಯಿಂದ ಸಾಲು ಮರದ ತಿಮ್ಮಕ್ಕ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಪರಿಸರ ಪ್ರೀತಿ ಮತ್ತು ಕಾಳಜಿಯನ್ನು ಯುವಜನತೆ ತಿಳಿಯದಿದ್ದರೆ ಭವಿಷ್ಯದಲ್ಲಿ ಹವಾಮಾನ ಏರುಪೇರಾಗಿ ಮಾನವ ಮತ್ತು ಪ್ರಾಣಿ ಪಕ್ಷಿಗಳ ಜೀವನ ಅನಾರೋಗ್ಯಕ್ಕೀಡಾಗುತ್ತದೆ. ತಿಮ್ಮಕ್ಕ ಅವರು ತನ್ನ ಜೀವನವನ್ನು ಗಿಡಗಳನ್ನು ನೆಟ್ಟು ಬೆಳೆಸಲು ಮುಡುಪಾಗಿಟ್ಟರು. ಇವರು ನಾಡಿಗಲ್ಲದೆ ಪ್ರಪಂಚಕ್ಕೆ ಮಾದರಿಯಾಗಿ ಬದುಕಿದರು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್ ಮಾತನಾಡಿ, ತಿಮ್ಮಕ್ಕ ಅವರ ನೆನಪು ಸದಾ ಅಜರಾಮರ. ತಿಮ್ಮಕ್ಕ ಅವರ ಪರಿಸರ ಕಾಳಜಿ ಅಪಾರವಾದುದು ಎಂದರು.
ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಅಗಲೀಕರಣ ಕಾಮಗಾರಿಯಿಂದ ರಸ್ತೆ ಬದಿಯಲ್ಲಿರುವ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. ತಿಮ್ಮಕ್ಕ ಅವರ ಹೆಸರು ಸದಾ ಹಸಿರಾಗಿರಲು, ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ನಂತರ ಅರಣ್ಯ ಇಲಾಖೆ ಸಹಕಾರದೊಂದಿಗೆ ಎಲ್ಲರೂ ಸೇರಿ ಗಿಡಗಳನ್ನು ನೆಟ್ಟು ಪೋಷಿಸಲು, ಸ್ಥಳೀಯ ಸಂಘಸಂಸ್ಥೆಗಳ ನೆರವಿನೊಂದಿಗೆ ಕಾರ್ಯಗತ ಮಾಡೋಣ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕಕ ವಿಜಯ ಸಂಪಾಂಗವಿ, ವಕೀಲರಾದ ಮಂಜೇಗೌಡ, ಬಿ.ಡಿ. ಸಂದೀಪ್, ರವಿಶಂಕರ್, ಕೆ.ಎನ್. ನಾಗರಾಜ್, ಟಿ. ಮಂಜುನಾಥ್, ಕೀರ್ತಿಕುಮಾರ್, ದುಷ್ಯಂತ್ ಮತ್ತು ವಕೀಲರ ಸಂಘದ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.