ಆಲೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಜನಸಾಮಾನ್ಯರು ತಿರುಗಾಡಲು ಭಯಭೀತರಾಗಿದ್ದಾರೆ. ಇತ್ತೀಚೆಗೆ ಪ್ರತಿಯೊಂದು ಗಲ್ಲಿ, ರಸ್ತೆ ಎಲ್ಲೆಂದರಲ್ಲಿ ಬೀದಿ ನಾಯಿಗಳು ಜನರು ಮತ್ತು ಪುಟ್ಟ ಕರುಗಳ ಮೇಲೆ ಎರಗಿ ಗಾಯಗೊಳಿಸುತ್ತಿವೆ.
ಹಲವು ವರ್ಷಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಲ್ಕಾರು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಆಡಳಿತ ನಾಯಿಗಳನ್ನು ಹಿಡಿದ ಬೇರೆಡೆಗೆ ಸಾಗಿಸಲು ಪ್ರಚಾರದ ಮೂಲಕ ಸ್ಥಳೀಯರಿಗೆ ತಿಳಿಸಿ, ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುತ್ತಿದ್ದರು.
ಆದರೆ ಕೆಲ ವರ್ಷಗಳಿಂದೀಚೆಗೆ ಪ್ರಾಣಿ ದಯಾ ಸಂಘದವರು ಬೀದಿ ನಾಯಿಗಳನ್ನು ಹಿಡಿಯದಂತೆ, ಕೊಲ್ಲದಂತೆ ನ್ಯಾಯಾಲಯದಿಂದ ಆದೇಶ ತಂದಿರುವುದರಿಂದ ನಾಯಿಗಳನ್ನು ನಿಯಂತ್ರಣ ಮಾಡುವುದು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಕೈಕಟ್ಟಿದಂತಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಒಂದೆಡೆ ನ್ಯಾಯಾಲಯದ ಆದೇಶ, ಮತ್ತೊಂದೆಡೆ ಬೀದಿ ನಾಯಿಗಳ ಉಪಟಳಕ್ಕೆ ತುತ್ತಾಗುತ್ತಿರುವ ಜನಸಾಮಾನ್ಯರ ಆಕ್ರೋಶಕ್ಕೆ, ಸ್ಥಳೀಯ ಪಟ್ಟಣ ಪಂಚಾಯಿತಿ ತುತ್ತಾಗಿದ್ದು, ನಿಯಂತ್ರಣಕ್ಕೆ ದಾರಿ ಕಾಣದಿರುವುದರಿಂದ ಜನರು ಪಂಚಾಯಿತಿ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ವ್ಯಕ್ತಿಗಳು ಶನಿವಾರ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಬರುತ್ತಿದ್ದಾಗ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ. ಸ್ಥಳೀಯರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಪಟ್ಟಣದಲ್ಲಿ ಸುಮಾರು 500ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಎಲ್ಲೆಂದರಲ್ಲಿ ಗುಂಪು, ಗುಂಪಾಗಿ ಅಲೆದಾಡುತ್ತಿವೆ. ರಾತ್ರಿ ವೇಳೆಯಲ್ಲಿ ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿಗಳಿಗೆ ಕಡಿವಾಣ ಹಾಕದಿದ್ದರೆ ಜನ-ಜಾನುವಾರುಗಳು ಓಡಾಡುವುದು ಕಷ್ಟವಾಗುತ್ತದೆ. ಕೂಡಲೇ ನಾಯಿಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.
ಬೀದಿ ನಾಯಿ ಹತೋಟಿಗೆ ತರಲು ಎಬಿಸಿ ಮೂಲಕ ಟೆಂಡರ್ ಕರೆದು ಕ್ರಮ ಕೈಗೊಲಾಗುತ್ತಿದೆ. ಮೊದಲಿನಂತೆ ಹಿಡಿದು ಸಾಗಿಸುವಂತಿಲ್ಲ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲಾತಿ ಕೊಟ್ಟರೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆಮಂಜುನಾಥ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಆಸ್ಪತ್ರೆಗೆ ಬರುವಾಗ ಬೀದಿ ನಾಯಿ ಕಚ್ಚಿದೆ. ನನ್ನದು ಬಡ ಕುಟುಂಬ. ಕೂಲಿ ಮಾಡುವ ನಾನೇ ಮಲಗಿದರೆ ಕುಟುಂಬದ ಪಾಡೇನು? ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರ ಅನುಮತಿ ನೀಡಬೇಕುರಾಜೇಗೌಡ ಮತ್ತು ಬೊಮ್ಮರಾಯಿಗೌಡ ನಾಯಿ ಕಡಿತಕ್ಕೆ ಒಳಗಾದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.