ಆಲೂರು: ನಗರೋತ್ಥಾನ ಯೋಜನೆಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧ್ಯಕ್ಷರು, ಸದಸ್ಯರು ಅಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ತಾಹೆರಬೇಗಂ ಮಾತನಾಡಿ, ‘ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ₹2.08 ಕೋಟಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಕಳೆದ ಜ.6ರಂದು ಜಿಲ್ಲಾ ನಗರಾಭಿವೃದ್ಧಿಕೋಶ ಇಲಾಖೆಗೆ ಪತ್ರ ಬರೆದು ಕೆಲಸ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ. ನಗರಾಭಿವೃದ್ಧಿಕೋಶ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಪಟ್ಟಣ ಪಂಚಾಯಿತಿ 11 ವಾರ್ಡ್‌ಗಳ ರಸ್ತೆ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಚರಂಡಿಗಳನ್ನು ಶುಚಿಗೊಳಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು. ಎಲ್ಲ ವಾರ್ಡುಗಳ ರಸ್ತೆ ಇಕ್ಕೆಲಗಳಲ್ಲಿ ಕೆಲ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಬೆಳೆಸಿ ಸಂಚಾರಕ್ಕೆ ತೊಡಕುಂಟು ಮಾಡಿದ್ದಾರೆ. ತೆರವುಗೊಳಿಸುವ ಮುನ್ನ ಪ್ರಚರಪಡಿಸಿ ತೆರವುಗೊಳಿಸಬೇಕು’ ಎಂದು ಎಲ್ಲ ಸದಸ್ಯರು ಆಗ್ರಹಿಸಿದರು.
ಅಧ್ಯಕ್ಷೆ ತಾಹೆರಬೇಗಂ ಮತ್ತು ಮುಖ್ಯಾಧಿಕಾರಿ ಮಂಜುನಾಥ್ ಅವರು ಉತ್ತರಿಸಿ, ಜೆಸಿಬಿ ಬಳಸಿ ತೆರವುಗೊಳಿಸಲು ಕೂಡಲೇ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಶಿಷ್ಟ ಜಾತಿಗೆ ಸೇರಿದ ಒಂದು ಮತ್ತು 8ನೇ ವಾರ್ಡುಗಳಿಗೆ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಸದಸ್ಯರಾದ ಧರ್ಮ, ಎ.ಡಿ. ಸಂತೋಷ್ ಸಭೆ ಬಹಿಷ್ಕರಿಸಿ ಹೊರ ನಡೆದರು. ಕೆಲ ಸಮಯದ ನಂತರ ಧರ್ಮ ಅವರು ಪುನಃ ಸಭೆಗೆ ಹಾಜರಾದರು.
ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ‘ಒಂದನೇ ವಾರ್ಡಿಗೆ ನಗರೋತ್ಥಾನದಲ್ಲಿ ₹33 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮತ್ತು ಎಸ್.ಎಫ್.ಸಿ. ಅನುದಾನದಲ್ಲಿ ₹2.40 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿ ಆಗಿದೆ’ ಎಂದು ಮಾಹಿತಿ ನೀಡಿದರು.
‘ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿದೆ. ಎಸ್.ಎಪ್.ಸಿ. ಅನುದಾನದಲ್ಲಿ 13 ಬಡ ವಿದ್ಯಾರ್ಥಿಗಳಿಗೆ ₹31 ಸಾವಿರ ವಿದ್ಯಾರ್ಥಿವೇತನ ಮತ್ತು ಪೌರ ಕಾರ್ಮಿಕರ ಇಬ್ಬರು ಮಕ್ಕಳಿಗೆ ಲ್ಯಾಪ್‍ಟಾಪ್ ನೀಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಲಾಯಿತು.
‘ಮುಖ್ಯರಸ್ತೆ ಮಧ್ಯೆ ಡಿವೈಡರ್‌ಗೆ ಆಲಂಕಾರಿಕ ದೀಪ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ಎಲ್ಲ ವಾರ್ಡ್‌ಗಳಿಗೆ ಆದ್ಯತೆ ಮೇಲೆ ಹಂಚುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸದಸ್ಯರಾದ ತೌಫಿಕ್, ಹರೀಶ್, ಅಬ್ದುಲ್‍ಖುದ್ದೂಸ್, ಸಂದೇಶ್, ಖಾಲಿದ್‍ಪಾಷ, ಶೀಲಾ, ಎಂಜಿನಿಯರ್ ಸುಜಾತ, ಸಿಬ್ಬಂದಿ ರಾಜಲಕ್ಷ್ಮಿ, ಲಲಿತಮ್ಮ, ಉಷಾರಾಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.