ಸಕಲೇಶಪುರ: ಶಿಸ್ತು ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಮೋಹನ್ ಆಳ್ವ ಅವರು ಇಡೀ ರಾಜ್ಯವೇ ತಿರುಗಿ ನೋಡುವಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ. ಕಲೆ, ಸಂಸ್ಕೃತಿಗೆ ಶ್ರೀಮಂತಿಕೆ ತಂದುಕೊಟ್ಟಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ನಡೆದ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದಲ್ಲಿ ಅವರು ಮಾತನಾಡಿದರು. ಈ ಶಿಕ್ಷಣ ಸಂಸ್ಥೆಯ ಮೂಲಕ ಕ್ರೀಡೆ, ಶಿಕ್ಷಣ, ಸಂಸ್ಕೃತಿ, ಕಲೆ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಮುನ್ನೋಟವನ್ನು ಮೋಹನ್ ಆಳ್ವ ಹಾಕಿಕೊಂಡಿದ್ದಾರೆ ಎಂದರು.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 22 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. 3 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡುತ್ತಿದ್ದಾರೆ. 300 ಅಂಗವಿಕಲ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ ನೀಡುತ್ತಿದ್ದಾರೆ. ₹50 ಕೋಟಿಗೂ ಹೆಚ್ಚು ಸೇವೆಗೆ ಮೀಸಲಿಟ್ಟಿದ್ದಾರೆ. ಮೂಡುಬಿದಿರೆಗೆ ಹೋದೇ ಇಡೀ ಭಾರತ ನೋಡಬಹುದು ಎಂದು ಶ್ಲಾಘಿಸಿದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಮೂಡುಬಿದಿರೆಗೆ ಮಾತ್ರವೇ ಸಾಂಸ್ಕೃತಿಕ ವೈಭವ ಸೀಮಿತ ಮಾಡದೇ ನಮ್ಮ ಕ್ಷೇತ್ರಕ್ಕೆ ಬಂದು ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ ಎಂದರು.
ಮೋಹನ್ ಆಳ್ವ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಪ್ರಚಾರಕ್ಕಾಗಲಿ, ವ್ಯಾಪಾರಕ್ಕಾಗಿ ಬಂದಿಲ್ಲ. ದೇಶದ ಕಲೆಯನ್ನು ಬಿತ್ತರಿಸುವ, ಸೌಂದರ್ಯ ಪ್ರಜ್ಞೆ ಮೂಡಿಸಲು ಇಂತಹ ಸಾಂಸ್ಕೃತಿಕ ವೈಭವ ನಾಡಿನಾದ್ಯಂತ ಮಾಡಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್ ಕುಮಾರ್, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್, ಹಾಸನದ ಧರ್ಮಸ್ಥಳ ಆಯುರ್ವೇದ ಕಾಲೇಜು ನಿರ್ದೇಶಕ ಡಾ.ಪ್ರಸನ್ನ ನರಸಿಂಹರಾವ್, ಪುರಸಭೆ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ, ಪುರಸಭಾ ಸದಸ್ಯ ಮುಖೇಶ್ ಶೆಟ್ಟಿ, ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದ ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಸಂಜೀತ್ ಶೆಟ್ಟಿ, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸಿ.ಪಿ.ಪ್ರಸನ್ನಕುಮಾರ್, ಕೆ.ಆರ್. ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಚನ್ನವೇಣಿ ಎಂ. ಶೆಟ್ಟಿ, ಸಹನಾ ಶಶಿಧರ್, ರವಿರಾಜ್ ಪಿ. ಶೆಟ್ಟಿ, ವಸ್ತಾರೆ ಲೋಕೇಶ್, ಪ್ರಸೀನ್ ಶೆಟ್ಟಿ, ಜೈ ಭೀಮ್ ಮಂಜು, ಕೆ.ಆರ್. ಕವಿತಾ, ಬಾಳ್ಳು ಮಲ್ಲಿಕಾರ್ಜುನ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.