ಅರಕಲಗೂಡು (ಹಾಸನ ಜಿಲ್ಲೆ): ಗಂಭೀರ ಸ್ವರೂಪದ ರಕ್ತದ ಕ್ಯಾನ್ಸರ್ ‘ಅಕ್ಯೂಟ್ ಮೈಲಾಯ್ಡ್ ಲೂಕೆಮಿಯಾಗೆ (ಎಎಂಎಲ್) ಹೊಸ ಚಿಕಿತ್ಸಾ ವಿಧಾನವನ್ನು ತಜ್ಞರ ತಂಡ ಕಂಡುಹಿಡಿದಿದೆ.
ಪಟ್ಟಣದ ವಿಜ್ಞಾನಿ ಹಾಗೂ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಕೋಮಲ್ ಕುಮಾರ್ ಜವರಪ್ಪ ಅವರನ್ನು ಒಳಗೊಂಡಿದ್ದ ಅಂತರರಾಷ್ಟ್ರೀಯ ಸಂಶೋಧನಾ ತಂಡ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
‘ಫಿನ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್‌ನ ವಿಜ್ಞಾನಿಗಳಿಂದ ನಡೆಸಲಾದ ಸಂಶೋಧನೆಯಲ್ಲಿ, ‘ಎಂಐಕೆ 665’ ಮತ್ತು ‘ವೆನೆಟೋಕ್ಲ್ಯಾಕ್ಸ್’ ಔಷಧಗಳ ಸಂಯೋಜನೆಯು ಎಎಂಎಲ್ ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದು ಕಂಡುಬಂದಿದೆ.
‘ಎಎಂಎಲ್ ಚಿಕಿತ್ಸೆಯ ಅಡೆತಡೆ ಎಂದರೆ ರೋಗಿಗಳು ಸರಿಯಾಗಿ ಸ್ಪಂದಿಸದಿರುವುದು. ಈಗಿನ ಸಂಶೋಧನೆಯಲ್ಲಿ, ಚಿಕಿತ್ಸೆ ಪರಿಣಾಮಕಾರಿಯಾಗದ ರೋಗಿಗಳಲ್ಲಿ ಎಬಿಸಿಬಿ1 ಎಂಬ ವಂಶವಾಹಿ ಮಟ್ಟ, ಬಿಸಿಎಲ್–ಎಕ್ಸ್‌ಎಲ್ ಎಂಬ ಪ್ರೋಟೀನ್ ಸಿಗ್ನಲ್ ಅಧಿಕವಾಗಿ ಕಂಡುಬಂದಿದೆ. ಈ ಹೊಸ ಔಷಧ ಸಂಯೋಜನೆ ರೋಗ ನಿರ್ವಹಣೆಗೆ ಆಶಾಕಿರಣವಾಗಿದೆ’ ಎಂದು ಕೋಮಲ್‌ಕುಮಾರ್ ತಿಳಿಸಿದರು.
ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಮುಖ್ಯ ಸಾಧನೆಯಾಗಿದೆ. ಈ ಕುರಿತ ಸಂಶೋಧನಾ ಲೇಖನ ನೆದರ್‌ಲ್ಯಾಂಡ್‌ನ ವೈಜ್ಞಾನಿಕ ಜರ್ನಲ್ ‘ಮಾಲಿಕ್ಯುಲರ್ ಆಂಕಾಲಜಿ’ಯಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.