ಅರಕಲಗೂಡು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಣೆಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರಗೌಡ ಗುರುವಾರ ಚಾಲನೆ ನೀಡಿದರು.
ಪಟ್ಟಣದ ಕೋಟೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಿದ ಅವರು, ಮಾರ್ಚ್ ತಿಂಗಳಿನಿಂದ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ಬಾರಿ ಫೆಬ್ರುವರಿ ತಿಂಗಳ 5 ಕೆ.ಜಿ. ಸೇರಿ 15 ಕೆ.ಜಿ ನೀಡಲಾಗುತ್ತಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಪಡಿತರ ವಿತರಣೆ ಕುರಿತು ಹಲವು ದೂರುಗಳಿದ್ದು, ನ್ಯಾಯ ಬೆಲೆ ಅಂಗಡಿ ಮಾಲೀಕರ ಸಭೆ ನಡೆಸಿ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಅಂಗಡಿ ಮಾಲೀಕರ ಕುಂದು–ಕೊರತೆಗಳ ಬಗ್ಗೆಯೂ ಗಮನ ಹರಿಸಲಾಗಿದೆ. ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರು ಯಾವುದೇ ಲೋಪಗಳಿಗೆ ಎಡೆಮಾಡದೆ ಯೋಜನೆಯನ್ನು ಜನರಿಗೆ ತಲುಪಿಸಬೇಕು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ, ಎಲ್ಲ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆ ಕುರಿತು ಅಪಸ್ವರ ಎತ್ತಿ ಸರ್ಕಾರ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದವು. ಈಗ ಯಶಸ್ವಿಯಾಗಿರುವುದನ್ನು ಕಂಡು ಗ್ಯಾರಂಟಿ ಯೋಜನೆ ಅಧ್ಯಕ್ಷ ಸ್ಥಾನವನ್ನೂ ಶಾಸಕರಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
ತಹಶೀಲ್ದಾರ್ ಕೆ.ಸಿ.ಸೌಮ್ಯ, ಆಹಾರ ಇಲಾಖೆ ಶಿರಸ್ತೇದಾರ್ ಎಲ್.ಬಿ.ಮಂಜು, ಅಂಗಡಿ ಮಾಲೀಕ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಸೋಮಶೇಖರ್, ಸದಸ್ಯರಾದ ರಾಜೇಶ್, ಧರ್ಮ, ಸತ್ಯರಾಜ್, ವೀಣಾ, ನಗರ ಪ್ರಾಧಿಕಾರ ಅಧ್ಯಕ್ಷ ಗುರುಮೂರ್ತಿ, ಐಎನ್ ಟಿಯುಸಿ ಅಧ್ಯಕ್ಷ ರಂಗನಾಥ್, ಕೆಡಿಪಿ ಸದಸ್ಯ ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.