ADVERTISEMENT

ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

ಎಚ್.ಎಸ್.ಅನಿಲ್ ಕುಮಾರ್
Published 24 ನವೆಂಬರ್ 2025, 1:48 IST
Last Updated 24 ನವೆಂಬರ್ 2025, 1:48 IST
<div class="paragraphs"><p>ಹಳೇಬೀಡಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಅಡಿಕೆ ಬೆಳೆಗಾರ ಎಚ್.ಎಂ. ಸುರೇಶ್ ಶಂಭು ಅವರು ಒಣಗಲು ಹಾಕಿದ್ದ ಬೇಯಿಸಿದ ಅಡಿಕೆ ನೀರಿನಲ್ಲಿ ನೆನೆದಿದೆ.</p></div>

ಹಳೇಬೀಡಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಅಡಿಕೆ ಬೆಳೆಗಾರ ಎಚ್.ಎಂ. ಸುರೇಶ್ ಶಂಭು ಅವರು ಒಣಗಲು ಹಾಕಿದ್ದ ಬೇಯಿಸಿದ ಅಡಿಕೆ ನೀರಿನಲ್ಲಿ ನೆನೆದಿದೆ.

   

ಹಳೇಬೀಡು: ಶನಿವಾರ ರಾತ್ರಿ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಬೇಯಿಸಿ ಒಣಗಲು ಬಯಲಿನಲ್ಲಿ ಹರಡಿದ್ದ ಅಡಿಕೆ ನೀರಿನಲ್ಲಿ ನೆನೆದು ಫಂಗಸ್ ಬರುವ ಹಂತಕ್ಕೆ ತಲುಪಿದೆ.

‘ಮಳೆ ಬರುವ ಸೂಚನೆ ಇಲ್ಲದ್ದರಿಂದ ಬೆಳೆಗಾರರು ಟಾರ್ಪಾಲು ಹೊದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಡಿಕೆ ಸಂಪೂರ್ಣವಾಗಿ ನೀರು ಕುಡಿದಿದೆ. ಮೋಡ ಮುಸುಕಿದ ವಾತಾವರಣ ಬಂದರೆ, ನೆನೆದು ತೊಪ್ಪೆಯಾಗಿರುವ ಅಡಿಕೆ ಒಣಗುವುದಿಲ್ಲ. ತೇವಾಂಶ ಆರದಿದ್ದರೆ, ಫಂಗಸ್ ಮಾತ್ರವಲ್ಲದೇ ಅಡಿಕೆ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ. ನೆನೆದಿರುವ ಅಡಿಕೆ ಒಣಗಿದರೂ ತೂಕ ಇಳಿಕೆಯಾಗುತ್ತದೆ. ಅಕಾಲಿಕ ಮಳೆಯಿಂದ ಅಡಿಕೆಯನ್ನು ಬೇಯಿಸಿ ಒಣಗಲು ಹಾಕಿದ್ದ ಬೆಳೆಗಾರರಿಗೆ ನಷ್ಪ ಕಟ್ಟಿಟ್ಟ ಬುತ್ತಿ’ ಎಂದು ಅಡಿಕೆ ಬೆಳೆಗಾರ ಎಚ್.ಎಂ. ಸುರೇಶ್ ಶಂಭು ಬೇಸರ ವ್ಯಕ್ತಪಡಿಸಿದರು.

ADVERTISEMENT

20 ದಿನದ ಹಿಂದೆ ಬಿದ್ದ ಮಳೆಯಿಂದ ಸಂಸ್ಕರಿಸಿದ ಅಡಿಕೆಗೆ ಫಂಗಸ್ ಬಂದು ಸಷ್ಟವಾಯಿತು. ಈಗ ಒಣಗಿಸುತ್ತಿದ್ದ ಅಡಿಕೆಯೂ ಮಳೆಗೆ ಸಿಕ್ಕಿರುವುದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘20 ದಿನದ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದ 80 ಕ್ವಿಂಟಲ್ ಅಡಿಕೆ ಫಂಗಸ್ ಬಂದು ಹಾಳಾಯಿತು. ಈಗ 30 ಕ್ವಿಂಟಲ್ ಅಡಿಕೆ ನೀರು ಕುಡಿದಿದೆ. ಒಟ್ಟು ₹ 3.5 ಲಕ್ಷ ನಷ್ಟವಾಗಿದೆ. ಬೆಳೆಗಾರ ಎಚ್.ಸಿ.ಪ್ರವೀಣ್ ಅವರು ಒಣಗಿಸಲು ಹಾಕಿದ ಅಡಿಕೆ ಸಹ ನೀರಿನಲ್ಲಿ ನೆನೆದು ತೊಪ್ಪೆಯಾಗಿದೆ. ಅವರಿಗೂ ಅಂದಾಜು ₹ 3.5 ಲಕ್ಷ ನಷ್ಟವಾಗಿದೆ. ನೀರು ಕುಡಿದಿರುವುದರಿಂದ ಬಿಸಿಲು ಬಂದರೂ ಅಡಿಕೆ ಒಣಗಿಸುವುದು ಸುಲಭ ಸಾಧ್ಯವಾಗಿಲ್ಲ’ ಎಂದು ಸುರೇಶ್ ಹೇಳಿದರು.

ಹಳೇಬೀಡು ಭಾಗದಲ್ಲಿ ಅಂದಾಜು 3ಸಾವಿರ ಎಕರೆ ಅಡಿಕೆ ಬೆಳೆ ಇದೆ. ಬೇಲೂರು ತಾಲ್ಲೂಕಿನಲ್ಲಿ 12ಸಾವಿರ ಎಕರೆ ಬೆಳೆ ಇರಬಹುದು. ಕಾರ್ತೀಕ ಮಾಸ ಮುಗಿದ ನಂತರ ಸಾಮಾನ್ಯವಾಗಿ ಮಳೆ ಇಲ್ಲದಂತಾಗುತ್ತದೆ. ಕಾರ್ತೀಕ ಮುಗಿದ ನಂತರವೂ ಜೋರು ಮಳೆ ಸುರಿದಿರುವುದು ಅಡಿಕೆ ಬೆಳೆಗಾರರು ಹಾಗೂ ವರ್ತಕರಲ್ಲಿ ಆತಂಕ ಉಂಟು ಮಾಡಿದೆ.

ಸಂಕಷ್ಟ ತಂದ ಹವಾಮಾನ ವೈಪರೀತ್ಯ

‘ಹವಾಮಾನ ದಿಢೀರ್ ಬದಲಾದಾಗ ಕೃಷಿ ಚಟುವಟಿಕೆಗೆ ತೊಡಕಾಗುವುದು ಸಹಜ. ಒಣಗಲು ಅಡಿಕೆ ಹರಡಿದ ರೈತರು, ಮಳೆ ಬಿದ್ದ ತಕ್ಷಣ ಟಾರ್ಪಾಲು ಹೊದಿಸಲು ಸಿದ್ಧತೆ ಮಾಡಿಕೊಂಡಿರಬೇಕು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೇಳಿದರು.

‘ಅಲ್ಪಾವಧಿ ಕೃಷಿಯಿಂದ ನಷ್ಟ ಅನುಭವಿಸಿದ ಸಾಕಷ್ಟು ರೈತರು ತಮ್ಮ ಜಮೀನುಗಳಲ್ಲಿ ಅಡಿಕೆ ಬೆಳೆಸಿದ್ದಾರೆ. 5 ವರ್ಷದ ಹಿಂದೆ ಬರಗಾಲ ಬಂದು ಫಸಲು ಬಿಡುತ್ತಿದ್ದ ಅಡಿಕೆ ಮರಗಳು ಧರೆಗುರುಳಿವೆ. ಹಳೇಬೀಡು ಭಾಗದಲ್ಲಿ 200 ರೈತರು ಅಡಿಕೆ ತೋಟ ಕಳೆದುಕೊಂಡರು. ಈಗ ನಾಲ್ಕು ವರ್ಷದಿಂದ ಪ್ರತಿ ವರ್ಷ ಅಡಿಕೆ ಸಂಸ್ಕರಣೆಗೆ ಹವಾಮಾನ ವೈಪರೀತ್ಯ ಕಾಡುತ್ತಿದೆ’ ಎಂದು ಸುರೇಶ್ ಹೇಳಿದರು.

ವರ್ತಕರಿಂದಲೂ ಹಿಂದೇಟು

‘ಕೆಲವರು ಅಡಿಕೆ ತೋಟಗಳನ್ನು ಕೊಯ್ಲು ಮಾಡಿಕೊಂಡು ಹೋಗಲು ಚೇಣಿ ಕೊಡುತ್ತಾರೆ. ವರ್ತಕರು ಕಾರ್ಮಿಕರನ್ನು ಕರೆದುಕೊಂಡು ಬಂದು ಕೊಯ್ಲು ಮಾಡಿ. ಅಡಿಕೆ ಬೇಯಿಸುತ್ತಾರೆ. ಮಳೆ ಮುಂದುವರಿದರೆ ವರ್ತಕರು ಕೊಯ್ಲು ಮಾಡಿ, ಹಣ ಕೊಟ್ಟು ಹೋಗಲು ಹಿಂದೇಟು ಹಾಕುತ್ತಾರೆ. ಮಳೆ ಹೊಡೆತಕ್ಕೆ ಮರಗಳಿಂದ ಅಡಿಕೆ ಉದುರಿ ಹಾಳಾಗುವ ಸಾಧ್ಯತೆ ಇರುತ್ತದೆ’ ಎಂದು ರೈತ ಮಲ್ಲಿಕಾರ್ಜುನ ತಿಳಿಸಿದರು.

‘ಮಲೆನಾಡು ಭಾಗದಲ್ಲಿ ಅಡಿಕೆ ಒಣಗಿಸಲು ಕಾಂಕ್ರೀಟ್ ಕಣ ಮಾಡಿಕೊಂಡಿರುತ್ತಾರೆ. ಈ ಭಾಗದ ಸಣ್ಣ ರೈತರು ಕಣ ನಿರ್ಮಿಸುವುದು ಕಷ್ಟ. ದುಬಾರಿ ಬೆಲೆಯ ಒಣಗಿಸುವ ಯಂತ್ರ ಖರೀದಿಸುವುದೂ ಕಷ್ಟ’ ಎಂದು ರೈತ ಬಸವರಾಜು ಹೇಳಿದರು.

‘ಅಕಾಲಿಕ ಮಳೆಯಿಂದ ಖರೀದಿ ಮಾಡಿದ ಅಡಿಕೆ ಸಿಪ್ಪೆ ಸುಲಿದು ಬೇಯಿಸುವುದಕ್ಕೆ ಕಷ್ಟವಾಗಿದೆ. ತೋಟಕ್ಕೆ ಇಳಿದು ಕೊಯ್ಲು ಮಾಡಿಸುವುದಕ್ಕೂ ಕಷ್ಟವಾಗಿದೆ’ ಎಂದು ವರ್ತಕ ಬಿರೂರಿನ ಕಿರಣ್ ಹೇಳಿದರು.

ಕನಿಷ್ಠ 8 ದಿನ ಬಿಸಿಲು ಬಂದರೆ ಒಣಗಿಸಿ, ಗುಣಮಟ್ಟದ ಅಡಿಕೆ ಉತ್ಪಾದಿಸಬಹುದು. ಹವಾಮಾನದಲ್ಲಿ ವ್ಯತ್ಯಾಸ ಆಗುತ್ತಿದ್ದು, ಮಳೆ ಯಾವಾಗ ಬರುತ್ತದೆ ಎಂಬ ಆತಂಕ ಹೆಚ್ಚಿದೆ
ಎಚ್.ಎಂ. ಸುರೇಶ್ ಶಂಭುಅಡಿಕೆ ಬೆಳೆಗಾರ
ಅಡಿಕೆ ಸಂಸ್ಕರಣೆ ಮಾಡಿ ಒಣಗಿಸಬೇಕಾಗುತ್ತದೆ. ಬೆಳೆಗಾರರಿಗೆ ಸರ್ಕಾರದಿಂದ ಕಾಂಕ್ರೀಟ್ ಕಣಗಳನ್ನು ಮಾಡಿಕೊಟ್ಟರೆ ಅನುಕೂಲವಾಗುತ್ತದೆ
ಮಲ್ಲಿಕಾರ್ಜುನ, ರೈತ, ಹಳೇಬೀಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.