ADVERTISEMENT

ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ

₹40 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಹಾಸನ, ಚಿಕ್ಕಮಗಳೂರು, ತುಮಕೂರು, ಶಿಮಮೊಗ್ಗದಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 13:50 IST
Last Updated 9 ಅಕ್ಟೋಬರ್ 2020, 13:50 IST
 ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
 ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.   

ಹಾಸನ: ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು, ₹ 40 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತುಮಕೂರು ನಗರದ ಮರಳೂರು ದಿಣ್ಣೆ ನಿವಾಸಿ ಮುಬಾರಕ್‌ ಬಂಧಿತ ಆರೋಪಿ. ವೆಲ್ಡಿಂಗ್‌ ಕೆಲಸ ಮಾಡುವ ಈತ ಹಾಸನ ಜಿಲ್ಲೆಯ 6 (ಬೇಲೂರು, ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ), ಚಿಕ್ಕಮಗಳೂರು ಜಿಲ್ಲೆಯ 6, ತುಮಕೂರು ಜಿಲ್ಲೆಯ 4, ಶಿವಮೊಗ್ಗ ಜಿಲ್ಲೆಯ 3 ಸೇರಿ ಒಟ್ಟು 19 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

760 ಗ್ರಾಂ ಚಿನ್ನ ಮತ್ತು 1 ಕೆ.ಜಿ 100 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ವರೀಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

ಅರಸೀಕೆರೆಯ ಮಹಾಲಕ್ಷ್ಮಿ ಅವರು ಸೆ.1ರಂದು ಬೆಳಿಗ್ಗೆ 11.30ರಲ್ಲಿ ಮನೆಗೆ ಬೀಗ ಹಾಕಿ ಅಂಚೆ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಹಿಂಬಾಗಿಲ ಬೀಗ ಒಡೆದು ಮನೆಯೊಳಗಿನ ಬೀರುವಿನಿಂದ ₹1,22,900 ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿದ್ದ. ತನಿಖೆ ಕೈಗೊಂಡ ಪೊಲೀಸರಿಗೆ ಅ.8ರಂದು ತಿಪಟೂರು ನಗರದ ಬಿ.ಎಚ್‌. ರಸ್ತೆಯಲ್ಲಿರುವ ಆಭರಣ ಅಂಗಡಿ ಮುಂಭಾಗ ಅನುಮಾನಸ್ವಾದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಗೊತ್ತಾಗಿದೆ ಎಂದರು.

ವಿಚಾರಣೆ ವೇಳೆ 19 ಮನೆಗಳಲ್ಲಿ ಕಳ್ಳತನವನ್ನು ಒಬ್ಬನೇ ಮಾಡಿರುವುದಾಗಿ ಹೇಳಿದ್ದಾನೆ. ನಗರ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಕಾರಣ ಗ್ರಾಮೀಣ ಪ್ರದೇಶದ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಬೈಕ್‌ನಲ್ಲಿ ಒಬ್ಬನೇ ಸುತ್ತಾಡುತ್ತ ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿದ್ದಎಂದು ಹೇಳಿದರು.

ಆರೋಪಿಯ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಡಿವೈಎಸ್‌ಪಿ ನಾಗೇಶ್‌, ಸಿಪಿಐ ಕೆ.ಎಂ. ವಸಂತ್‌, ಪಿಎಸ್‌ಐ ಅರುಣ್‌ಕುಮಾರ್‌, ಬಸವರಾಜ ಉಪ್ಪದಿನ್ನಿ, ಸಿಬ್ಬಂದಿಗಳಾದ ಹೀರಾಸಿಂಗ್‌, ನಂಜುಂಡೇಗೌಡ, ಲೋಕೇಶ್‌, ಎ.ಎಸ್‌. ನಾಗೇಂದ್ರ, ರವಿಪ್ರಕಾಶ್‌, ಚಿತ್ರಶೇಖರಪ್ಪ, ಹೇಮಂತ, ಹರೀಶ್‌, ಪುಟ್ಟಸ್ವಾಮಿ, ಪ್ರದೀಪ, ನಾಗರಾಜನಾಯ್ಕ, ಮಧು, ಕೇಶವಮೂರ್ತಿ ಮತ್ತು ಜೀಪ್‌ ಚಾಲಕ ವಸಂತಕುಮಾರ್‌, ಸಿದ್ಧೇಶ ಮತ್ತು ತಾಂತ್ರಿಕ ವಿಭಾಗ ಪೀರ್‌ ಖಾನ್‌ ಅವರಿಗೆ ಪ್ರಶಂಸ ಪತ್ರ ಹಾಗೂ ನಗದು ಬಹುಮಾನವನ್ನು ಎಸ್‌ಪಿ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.