
ಅರಸೀಕೆರೆ: ಶಿಕ್ಷಕರ ದೈನಂದಿನ ಬೋಧನಾ ಒತ್ತಡದಿಂದ ವಿರಾಮ ನೀಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಕ್ರಿಯವಾಗಿರಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅರಸೀಕೆರೆ ತಾಲ್ಲೂಕು ಘಟಕದ ಕಸಬಾ 2 ಶಿಕ್ಷಕರ ವಿಭಾಗ ಶನಿವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಮತ್ತು ಥ್ರೊಬಾಲ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕು. ಮಾರ್ಗದರ್ಶನವಿಲ್ಲದೆ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.
ನಗರಸಭಾ ಮಾಜಿ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಶಿಕ್ಷಕರು ಇಲ್ಲದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಶಿಕ್ಷಕರು ಉತ್ತಮ ವಾತಾವರಣದಲ್ಲಿ ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗಿರುತ್ತದೆ. ಇದಕ್ಕೆ ಕ್ರೀಡೆ ಸಹಕಾರಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ , ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು ಕೆ.ಎಸ್., ನೌಕರರ ಸಂಘದ ನಿರ್ದೇಶಕ ಹುಲ್ಲಳ್ಳಿ ಬಸವರಾಜು, ಸಹಕಾರ್ಯದರ್ಶಿ ಶಾಂತಮ್ಮ , ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದಮೂರ್ತಿ , ಪ್ರಧಾನ ಕಾರ್ಯದರ್ಶಿ ಹಾಲಪ್ಪ , ಉಪಾಧ್ಯಕ್ಷ ದೇವೇಗೌಡ, ಶಿಕ್ಷಣ ಸಂಯೋಜಕ ಮಲ್ಲೇಶ್, ನಿಂಗಪ್ಪ, ಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.