
ಅರಸೀಕೆರೆ: ಹಾಸನದ ಶಾಲೆ–ಕಾಲೇಜುಗಳಿಗೆ ತೆರಳಲು ಬೆಳಗಿನ ವೇಳೆಯಲ್ಲಿ ಬಸ್ ಸೌಲಭ್ಯ ಇಲ್ಲದಂತಾಗಿದ್ದು, ಅರಸೀಕೆರೆ, ಹಾರನಹಳ್ಳಿ, ಬಾಗೇಶಪುರ ಹಾಗೂ ದುದ್ದ ವಿದ್ಯಾರ್ಥಿಗಳು ನಿತ್ಯ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಹಾರನಹಳ್ಳಿ, ಬಾಗೇಶಪುರ ಹಾಗೂ ದುದ್ದ ವಿದ್ಯಾರ್ಥಿಗಳಿಗೆ, ಜಿಲ್ಲಾ ಕೇಂದ್ರವಾದ ಹಾಸನವೇ ಹತ್ತಿರ. ಅಲ್ಲದೇ ಹಲವು ವಿದ್ಯಾಸಂಸ್ಥೆಗಳು ಇರುವುದರಿಂದ ಹೆಚ್ಚಿನ ಪೋಷಕರು, ತಮ್ಮ ಮಕ್ಕಳನ್ನು ಹಾಸನಕ್ಕೆ ಕಳುಹಿಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲದಂತಾಗಿವೆ. ಬಸ್ ನಿಲ್ದಾಣದಲ್ಲಿ ನಿಂತು ನಿಂತು ಹೈರಾಣಾಗುತ್ತಿರುವ ವಿದ್ಯಾರ್ಥಿಗಳು, ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ವಿದ್ಯಾರ್ಥಿಗಳ ಜೊತೆಗೆ ಅನೇಕ ನೌಕರರು, ಜಿಲ್ಲಾ ಕಚೇರಿಗಳಲ್ಲಿ ಕೆಲಸ ಇರುವವರೂ ಅರಸೀಕೆರೆಯಿಂದ ಹಾಸನಕ್ಕೆ ತೆರಳುತ್ತಾರೆ. ಸರಿಯಾಗಿ ಬಸ್ ಸಿಗದೇ ಪರದಾಡುತ್ತಿದ್ದಾರೆ. ಬೆಳಿಗ್ಗೆ 8.30 ರಿಂದ 10 ಗಂಟೆಯೊಳಗೆ ಹೆಚ್ಚುವರಿ ಬಸ್ ಅಗತ್ಯವಾಗಿದ್ದು, ಸಾರಿಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು, ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಅರಸೀಕೆರೆಯಿಂದ ಹಾಸನಕ್ಕೆ ಬರುವ ಬೆರಳೆಣಿಕೆ ಬಸ್‌ಗಳಲ್ಲೇ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಸೇರಿ ಪ್ರಯಾಣಿಕರು ಪ್ರಯಾಣಿಸಬೇಕು. ನೂಕುನುಗ್ಗಲು ಉಂಟಾಗುತ್ತಿದೆ. ವಿದ್ಯಾರ್ಥಿಗಳು ಕಲಿಯುವುದಕ್ಕಿಂತ ಹೆಚ್ಚಿನ ಸಮಯ ಬಸ್‌ಗಾಗಿ ಕಾಯುವಂತಾಗಿದೆ ಎಂದು ಪೋಷಕರು ದೂರುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬೆಳಿಗ್ಗೆ 8 ರಿಂದ 9.30 ರೊಳಗೆ ಹೆಚ್ಚುವರಿ ಬಸ್ ಬಿಡಬೇಕು ಎಂಬುದು ನಾಗರಿಕರು ಹಾಗೂ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆ.
‘ಅರಸೀಕೆರೆಯಿಂದಲೇ ನೂರಾರು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಮುಂದಿನ ಮಾರ್ಗವಾದ ಹಾರನಹಳ್ಳಿ, ಬಾಗೇಶಪುರ ಹಾಗೂ ದುದ್ದ ಗ್ರಾಮಗಳಲ್ಲಿಯೂ ನಿತ್ಯ ಬಸ್‌ಗಾಗಿ ರಸ್ತೆಯಲ್ಲಿ ನಿಂತು ಕಾಯುವ ಸ್ಥಿತಿ ಬಂದಿರುವುದು ಖಂಡನೀಯ’ ಎನ್ನುತ್ತಾರೆ ಹಾರನಹಳ್ಳಿ ನಾಗೇಂದ್ರ.
ಬುಧವಾರ ಹುಣ್ಣಮೆ ಇದ್ದುದರಿಂದ ಯಾದಾಪುರಕ್ಕೆ ತೆರಳುವ ಭಕ್ತರಿಗಾಗಿ ಹೆಚ್ಚುವರಿ ಬಸ್‌ಗಳನ್ನು ಬಿಡಲಾಯಿತು. ಇನ್ನೊಂದೆಡೆ ಬೆಳಿಗ್ಗೆ 5.30 ರಿಂದ 8 ಗಂಟೆಯವರೆಗೆ ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬ್ಯಾಗ್ ಹಾಕಿಕೊಂಡು ಕಾಯುತ್ತಿದ್ದರೂ, ಬಸ್‌ಗಳೇ ಸಿಗದಂತಾಗಿತ್ತು.
ಗಂಟೆಗಟ್ಟೆಲೆ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುವ ಗೋಳು ನಮ್ಮದು. ಸಮಯಕ್ಕೆ ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ನಿತ್ಯವೂ ಇದೇ ಕಷ್ಟ ಎದುರಿಸಬೇಕಾಗಿದೆ-ಲಿಖಿತ್ ನಾಗ್, ವಿದ್ಯಾರ್ಥಿ
ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಹೆಚ್ಚುವರಿ ಬಸ್ ಬಿಡಲು ಕ್ರಮ ಕೈಗೊಳ್ಳಲಾಗುವುದು-ಕೃಷ್ಣಪ್ಪ, ಅರಸೀಕೆರೆ ಡಿಪೊ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.