ADVERTISEMENT

ಸಕಲೇಶಪುರ | ‘ಮಂತ್ರಮುಗ್ಧ’ರಾಗಿ ಕಲಾಪ ವೀಕ್ಷಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:00 IST
Last Updated 6 ಫೆಬ್ರುವರಿ 2026, 6:00 IST
ಸಕಲೇಶಪುರದ ಕೌಡಹಳ್ಳಿ ಎನ್‌.ಕೆ. ಗಣಪಯ್ಯ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ವಿದ್ಯಾರ್ಥಿಗಳನ್ನು ಮಂಗಳವಾರ ಶಾಸಕ ಸಿಮೆಂಟ್ ಮಂಜು ವಿಧಾನಸೌಧಕ್ಕೆ ಕರೆಸಿ ಕಲಾಪ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು.
ಸಕಲೇಶಪುರದ ಕೌಡಹಳ್ಳಿ ಎನ್‌.ಕೆ. ಗಣಪಯ್ಯ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ವಿದ್ಯಾರ್ಥಿಗಳನ್ನು ಮಂಗಳವಾರ ಶಾಸಕ ಸಿಮೆಂಟ್ ಮಂಜು ವಿಧಾನಸೌಧಕ್ಕೆ ಕರೆಸಿ ಕಲಾಪ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು.   

ಸಕಲೇಶಪುರ: ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಆದರೂ ಈ ಮಕ್ಕಳು ವಿಧಾನಸೌಧದ ಗ್ಯಾಲರಿಯಲ್ಲಿ ಕುಳಿತು, ಜನಪ್ರತಿನಿಧಿಗಳ ಮಾತುಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಶಿಕ್ಷಕರು ಸಂಕೇತ ಭಾಷೆಯಲ್ಲಿ ಹೇಳುತ್ತಿದ್ದ ವಿವರಣೆ ಕೇಳಿ ಕೆಲವೊಮ್ಮೆ ನಕ್ಕರು, ಕೆಲವೊಮ್ಮೆ ಗಂಭೀರವಾಗಿ ವಿಷಯ ತಿಳಿದುಕೊಂಡರು.

ಇಲ್ಲಿಯ ರೋಟರಿ ಟ್ರಸ್ಟ್‌ ವತಿಯಿಂದ ಕೌಡಹಳ್ಳಿಯಲ್ಲಿ ನಡೆಸುತ್ತಿರುವ ಎನ್‌.ಕೆ. ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಶಾಲೆಯ ಮಕ್ಕಳಿಗೆ ಶಾಸಕ ಸಿಮೆಂಟ್ ಮಂಜು ಮಂಗಳವಾರ ವಿಧಾನಸಭಾ ಕಲಾಪ ವೀಕ್ಷಣೆ ಮಾಡಿಸಿದರು.

ಮಾತು ಬಾರದ ಹಾಗೂ ಕಿವಿ ಕೇಳದ 48 ವಿದ್ಯಾರ್ಥಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬೆಂಗಳೂರಿಗೆ ತೆರಳಿ, ವಿಧಾನಸೌಧದಲ್ಲಿ ಕಾರ್ಯಕಲಾಪಗಳನ್ನು ಸುಮಾರು ಒಂದು ಗಂಟೆಗಳ ಕಾಲ ವೀಕ್ಷಣೆ ಮಾಡಿದರು. ಕಲಾಪ ನಡೆಯುತ್ತಿದ್ದಾಗ ಸದಸ್ಯರ ಚರ್ಚೆಯ ವಿಷಯಗಳನ್ನು ಶಾಲೆಯ ಶಿಕ್ಷಕರು ಸಂಕೇತ ಭಾಷೆಯಲ್ಲಿ ಮಕ್ಕಳಿಗೆ ತಿಳಿಸಿದರು.

ADVERTISEMENT

ಸಹಜವಾಗಿ ವಿಶೇಷ ಗಣ್ಯರು, ಅತಿಥಿಗಳು, ರಾಷ್ಟ್ರ, ಅಂತರರಾಷ್ಟ್ರೀಯ ಸಾಧಕರು ವಿಧಾನಸಭಾ ಅಧಿವೇಶನಕ್ಕೆ ಬಂದಾಗ ಅವರನ್ನು ಸಭಾಪತಿಗಳು ಗುರುತಿಸಿ ಸ್ವಾಗತಿಸುವುದು ಸಹಜ. ಕೌಡಹಳ್ಳಿ ಎನ್‌.ಕೆ. ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಶಾಲೆಯ ಮಕ್ಕಳು ಅಧಿವೇಶನ ವೀಕ್ಷಿಸಲು ಬಂದಿದ್ದಾರೆ. ಅವರಿಗೆ ಸ್ವಾಗತ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಮೇಜುಕುಟ್ಟಿ ಸ್ವಾಗತಿಸಿದ್ದು ಗಮನ ಸೆಳೆಯಿತು.

ಈ ಮಕ್ಕಳಿಗೆ ಕಿವಿ ಕೇಳುವುದಿಲ್ಲ, ಮಾತು ಸಹ ಬರುವುದಿಲ್ಲ. ಆದರೆ ಇವರು ನಮ್ಮೆಲ್ಲರಿಗಿಂತಲೂ ಹೆಚ್ಚು ಭಾವನಾತ್ಮಕರು. ವಿಧಾನಸೌಧ ಒಳಗೆ ಕಲಾಪ ಎಲ್ಲವನ್ನೂ ವೀಕ್ಷಣೆ ಮಾಡಿ ಹೊರ ಬಂದ ಮಕ್ಕಳು ಪ್ರೀತಿಯ ಅಪ್ಪುಗೆ ನೀಡಿ ಕೃತಜ್ಞತೆ ಸಲ್ಲಿಸಿದರು ಎಂದು ಶಾಸಕ ಸಿಮೆಂಟ್‌ ಮಂಜು ಸ್ಮರಿಸಿದರು.

ಶಾಸಕ ಸಿಮೆಂಟ್ ಮಂಜು ಅವರು ಶಾಲೆಯ 48 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಧಾನಸೌಧದಲ್ಲಿ ಕಲಾಪ ವೀಕ್ಷಣೆ ಮಾಡಿಸಿ, ಊಟೋಪಚಾರ ಮಾಡಿಸಿ ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಇದೊಂದು ಹೊಸ ಅನುಭವ. ರೋಟರಿ ಸಂಸ್ಥೆಯ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ರೋಟರಿ ಟ್ರಸ್ಟ್ ಅಧ್ಯಕ್ಷ ಎನ್‌.ಸಿ. ಸ್ವಾಮಿ, ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ವಿಧಾನಸೌಧದ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದ ಮಕ್ಕಳು.
‘ಅವಕಾಶ ದೊರೆತ ತೃಪ್ತಿ’
ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಾನಸಭಾ ಅಧಿವೇಶನ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು ಎಂದು ಅಂದುಕೊಂಡಿದ್ದೆ. ಅಂತಹ ಸುವರ್ಣ ಅವಕಾಶ ಇಂದು ದೊರೆತಿದ್ದಕ್ಕೆ ತೃಪ್ತಿ ಇದೆ ಎಂದು ಶಾಸಕ ಸಿಮೆಂಟ್‌ ಮಂಜು ಹೇಳಿದರು. ಮಕ್ಕಳು ಕಲಾಪ ವೀಕ್ಷಣೆ ಮಾಡಲು ಬಂದಿದ್ದಾರೆ ಎಂದು ಸಭಾಧ್ಯಕ್ಷರಿಗೆ ಪತ್ರ ಕಳಿಸಿದ್ದೆ. ಅದನ್ನು ಓದಿ ಸಭಾಧ್ಯಕ್ಷರು ಮಕ್ಕಳ ಉಪಸ್ಥಿತಿ ಗುರುತಿಸಿ ಸ್ವಾಗತಿಸಿದ್ದಕ್ಕೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲುತ್ತೇನೆ ಎಂದರು. ಸಕಲೇಶಪುರದ ರೋಟರಿ ಸಂಸ್ಥೆ ವತಿಯಿಂದ ಕೌಡಹಳ್ಳಿಯಲ್ಲಿ ಸುಮಾರು 4 ದಶಕಗಳಿಂದ ಶ್ರವಣದೋಷ ಉಳ್ಳ ಮಕ್ಕಳಿಗೆ ಉಚಿತವಾಗಿ ಊಟ ವಸತಿ ಹಾಗೂ ಶಿಕ್ಷಣ ನೀಡುತ್ತಿರುವುದು ದೊಡ್ಡ ಸೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.