ಹಾಸನ: ವಿಜಯದಶಮಿ ಹಾಗೂ ಆಯುಧ ಪೂಜೆ ಹಬ್ಬದ ಮುನ್ನಾ ದಿನವಾದ ಮಂಗಳವಾರ, ಬೆಲೆ ಏರಿಕೆ ನಡುವೆಯೂ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು.
ವಿಶೇಷವಾಗಿ ಆಯುಧ ಪೂಜೆಗೆ ಎಲ್ಲರೂ ಬಳಸುವ ಕುಂಬಳಕಾಯಿ, ಹೂವಿನ ಹಾರ, ಪೂಜಾ ಸಾಮಗ್ರಿ ಸೇರಿದಂತೆ ವಾಹನಗಳಿಗೆ ಅಲಂಕಾರ ಮಾಡುವ ಬಾಳೆಕಂದು, ಮಾವಿನ ಸೊಪ್ಪು, ಕಬ್ಬಿನ ಜಲ್ಲೆ ಸೇರಿದಂತೆ ಇತರೆ ಆಲಂಕಾರಿಕ ವಸ್ತುಗಳ ಖರೀದಿಗೆ ಸಾವಿರಾರು ಮಂದಿ ಮುಗಿಬಿದ್ದಿದ್ದರು.
ಹೂವಿನ ದರವಂತೂ ಕಳೆದ ಬಾರಿಗಿಂತ ಅಧಿಕವಾಗಿತ್ತು. ನಗರದ ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಡೈರಿ ವೃತ್ತ, ಸಾಲಿಗಾಮೆ ರಸ್ತೆ, ಸಂತೆಪೇಟೆ ವೃತ್ತ, ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ, ಸಂತೆಪೇಟೆ ರಸ್ತೆಯ ಉದ್ದಕ್ಕೂ ಕುಂಬಳಕಾಯಿ ಹೂವು ಸೇರಿದಂತೆ ಇತರೆ ವಸ್ತುಗಳ ಮಾರಾಟ ಜೋರಾಗಿತ್ತು .
ಒಮ್ಮೆಲೇ ಸಾವಿರಾರು ಜನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಹಲವು ವೃತ್ತ ಮತ್ತು ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ವಾಣಿಜ್ಯ ಮಳಿಗೆಯ ಮಾಲೀಕರು ಅಂಗಡಿ ಸ್ವಚ್ಛತೆಯಲ್ಲಿ ತೊಡಗಿದ್ದರು. ವಾಹನ ಮಾಲೀಕರು, ತಮ್ಮ ಮನೆಗಳಲ್ಲಿ ಹಾಗೂ ಖಾಸಗಿ ಆಟೋ ವರ್ಕ್ಸ್‌ನಲ್ಲಿ ವಾಹನಗಳನ್ನು ಸ್ವಚ್ಛಗೊಳಿಸುತ್ತಿರುವ ಹಾಗೂ ಅಂಗಡಿಗೆ ದೀಪಾಲಂಕಾರ ಮಾಡಿರುವ ದೃಶ್ಯಗಳು ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.